ಬಿಟ್ ಕಾಯಿನ್ ಪಡೆಯಲು ಬ್ಯಾಂಕ್ ಗೆ ಹೋದ ಮಿತ್ರನ ಕಥೆ!

 

ಬಿಟ್ ಕಾಯಿನ್ ಕೇಳಲು ಬ್ಯಾಂಕ್ ಗೆ ಹೋದ ಮಿತ್ರನ ಕಥೆ!

ಒಂದು ದಿನ ಬೆಳಿಗ್ಗೆ ನಮ್ಮ TOLL-NAKA ಮಿತ್ರ ನನಗೆ ಫೋನ್ ಮಾಡಿ ಬಿಟ್ ಕಾಯಿನ್ ಅಂದ್ರೆ ಏನು ಅಂತ ಕೇಳಿದ. ನಾನು ನಾಷ್ಟ ಮಾಡಿ ಬಾಯಿ ತೊಳ್ಕೊಂಡ್ ಫೋನ್ ಮಾಡ್ತೀನಿ ಈಗ ಫೋನ್ ಇಡ ಮಗನ ಅಂತ ಹೇಳಿದೆ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಮಿತ್ರನಿಗೆ ಫೋನ್ ಮಾಡಿ, ಓಹ್ ಅದಾ?..ಅದು ಒಂದು ನಮೂನಿ ಕಾಯಿನ್ ಅಂತ ಹೇಳಿದೆ. ಏ ಅದು ನಂಗೂ ಗೊತ್ತು. ಎಲ್ಲಿ ಸಿಗುತ್ತೆ ಹೇಳು ಅಂದ. ಅದನ್ನು ಬ್ಯಾಂಕ್ ನಲ್ಲಿ ಹೋಗಿ ಕೇಳು ಅಂತ ಹೇಳಿ ಮುಂದೆ ನನ್ನ ಮಾತು ಮುಗಿಸಬೇಕು ಅನ್ನುವಷ್ಟರಲ್ಲಿ ಇವ ಫೋನ್ ಕಟ್ ಮಾಡಿದ. ಇವ ಯಡವಟ್ ಮಾದಿಕೊಳ್ಳುವ ವಾಸನೆ ನನ್ನ ಮೂಗಿಗೆ ಬಡಿಯಿತು.

ಮಿತ್ರ ಬೆಳಿಗ್ಗೆ ಎದ್ದು ವಿದ್ಯಾಗಿರಿ ಬ್ಯಾಂಕ್ ಗೆ ಹೋದ. ಯಾಕಂದ್ರೆ ಇವನ ಅಕೌಂಟ್ ಅಲ್ಲಿ ಇತ್ತು. ಅಲ್ಲಿ HELP ಕೌಂಟರ್ ಬಳಿ ಹೋಗಿ ಬಿಟ್ ಕಾಯಿನ್ ಎಲ್ಲಿ ಕೊಡ್ತಾರ ಅಂತ ಕೇಳಿದ. ನಂಗೂ ಗೊತ್ತಿಲ್ಲ. ಹೊಸದಾಗಿ ಕೆಲಸಕ್ಕೆ JOIN ಆಗಿದೀನಿ. ನೀವು ಆರನೇ ನಂಬರ್ ಕೌಂಟರ್ ನಲ್ಲಿ ಹೋಗಿ ಕೇಳಿ ಅಂತ ಹೇಳಿದಳು ಅಲ್ಲಿದ್ದ ಮೇಡಂ.

ಇವ ಆರನೇ ಕೌಂಟರ್ ಬಳಿ ಹೋಗಿ ಪಾಳೆದಾಗ ನಿಂತ. ಪಾಳೆದಾಗ ನಿಲ್ಲುಕಿಂತ ಮೊದಲು ಅವರ ಬಳಿ ಹೋಗಿ ಬಿಟ್ ಕಾಯಿನ್ ಅದಾವ ಏನ್ರೀ ಅಂತ ಕೇಳಿದ್ದ. ಕೆಲಸದ ಒತ್ತಡದಲ್ಲಿ ಕ್ಲರ್ಕ್ ಸರಿಯಾಗಿ ಆಲಿಸದೇ ಪಾಳೆದಾಗ ಬರ್ರಿ ಎಲ್ಲ ಕಾಯಿನ್ ಕೊಡ್ತೀವಿ ಅಂತ ಹೇಳಿದ್ದರು. ಮಿತ್ರ ಖುಷಿಯಾಗಿ ಪಾಳೆದಾಗ ನಿಂತಿದ್ದ. ಇವನ ಪಾಳೆ ಬರೂಮಟ ಅಂದ್ರೆ ಒಂದು ತಾಸು ಹಿಡಿಯಿತು. ಕೌಂಟರ್ ಬಳಿ ಹೋಗಿ ಬಿಟ್ ಕಾಯಿನ್ ಕೊಡಿ ಅಂದ. ಎಲ್ಲಿ ಬಿಟ್ ಹೋಗಿರಿ ಅಲ್ಲಿ ಹುಡಕರಿ ಅಂತ ಹೇಳಿದರು ಕ್ಲರ್ಕ್. ಇವ ನಂಗೆ ಬಿಟ್ ಕಾಯಿನ್ ಬೇಕೆ ಬೇಕು. ಒಂದ್ ತಾಸ್ ಆತು ಇಲ್ಲಿ ನಿಂತು. ಇಲ್ಲ ಅಂದ್ರೆ ಮೊದಲೇ ಹೇಳಾಕ್ ಏನಾಗಿತ್ತು ಅಂದ. ಕಾಯಿನ್ ಬ್ಯಾಂಕಲ್ಲಿ ಇರದೇ ಇನ್ನೆಲ್ಲಿ ಇರುತ್ತೆ ಅಂತ ಮತ್ತೆ ಹಟ ಹಿಡಿದ. 

ಆರನೇ ನಂಬರ್ ಕ್ಲರ್ಕ್ ಎದ್ದು ಬಿರಿ ಬಿರಿ ಸರ್ ಬಳಿ ಹೋಗಿ ಸರ್, ಬಿಟ್ ಕಾಯಿನ್ ಕೇಳಲು ಒಬ್ಬ ಗಿರಾಕಿ ಬಂದಿದ್ದಾರೆ ಏನು ಮಾಡಲಿ ಅಂತ ಕೇಳಿದ. ನೋಡು, ಹಂಗಂದ್ರೆ ಏನು ಗೊತ್ತಿಲ್ಲ ಅಂತ ಹೇಳಬೇಡ. ಮರ್ಯಾದೆ ಪ್ರಶ್ನೆ. ನಮ್ಮಲ್ಲಿ ಇನ್ನೂ ಬಂದಿಲ್ಲ. ಮೈನ್ ಬ್ರಾಂಚ್ ನಲ್ಲಿ ಇದೆ ಅಂತ ಹೇಳಿ ಕಳಿಸು ಅಂತ ಹೇಳಿದರು. ಕ್ಲರ್ಕ್ ಬಂದು ನಿಮಗೆ ಅದು ಎದಕ ಬೇಕು ಬಿಟ್ ಕಾಯಿನ್ ಅಂತ ಕೇಳಿದ. ಅದಕ್ಕೇ ತೂತು ಮಾಡಿ ಕೊರಳಾಗ ಸರ ಮಾಡಿ ಹಾಕೊಂತೇನಿ. ನಿಮಗ್ಯಾಕೆ ಬೇಕು. ಬಿಟ್ ಕಾಯಿನ್ ಕೊಡಿ ನೀವು ಅಂದ ಇವ ಮಿತ್ರ. ನೋಡಿ ಪ್ಲೀಸ್ ಜೋರಾಗಿ ಕಿರುಚಾಡಿ ಉಪಯೋಗವಿಲ್ಲ. ನಮ್ಮಲ್ಲಿ ಅವು ಇನ್ನೂ ಬಂದಿಲ್ಲ. ನೀವು ಮೈನ್ ಬ್ರಾಂಚ್ ಗೆ ಹೋಗಿ ಕೇಳಿ ನೋಡಿ ಅಲ್ಲಿ ಬಂದಿದ್ದರೂ ಬಂದಿರಬಹುದು. ಅವರು ತಾವೇ ಇಟಗೊಂಡು ಬಿಡ್ತಾರೆ. ಬಂದಿದ್ದರೂ ನಮಗೆ ಕೊಡಲ್ಲ. ಹೋದ ಸಲ ಬಂದಿದ್ದ ಹೊಸ ಹತ್ತರ ನೋಟಿನ ಬಂಡಲ್ಲೆ ನಮಗೆ ಕೊಟ್ಟಿಲ್ಲ. ಇನ್ನು ಈ ಬಿಟ್ ಕಾಯಿನ್ ಕೊಡ್ತಾರ? ಅಂದ ಕ್ಲರ್ಕ್.

ಮಿತ್ರ ಕೆಸಿಡಿ ರಸ್ತೆಯ ಮೈನ್ ಬ್ರಾಂಚ್ ಗೆ ಹೋಗಿ ಕೌಂಟರ್ ನಲ್ಲಿ ಕ್ಲರ್ಕ್ ಗೆ ಕೇಳಿದ. ಅವರು ನಾನು ಬಿಝಿ ಇದ್ದೇನೆ. MANAGER ಗೆ ಭೇಟಿಯಾಗಿ ಅವರು ಕೊಟ್ರೆ ತೊಗೊಂಡು ಹೋಗಿ ಅಂತ ಹೇಳಿ ಕಳಿಸಿದರು. ಇವ ಮ್ಯಾನೇಜರ್ ಬಳಿ ಹೋಗಿ ಬಿಟ್ ಕಾಯಿನ್ ಬೇಕಾಗಿತ್ತು ಅಂತ ತೇಕುತ್ತ ಕೇಳಿದ. ಮ್ಯಾನೇಜರ್, ಮಿತ್ರನಿಗೆ ಕೂಡಲು ಹೇಳಿ ಕುಡಿಯಲು ಒಂದು ಗ್ಲಾಸ್ ನೀರು ತರಿಸಿದರು. ನೀವು ಫರ್ಸ್ಟ್ ನೀರು ಕುಡಿಯಿರಿ. ಆ ಮೇಲೆ ನಿಧಾನವಾಗಿ ನಾನು ವಿವರಿಸುತ್ತೇನೆ ಅಂತ ಹೇಳಿದರು. ನಿಮಗೆ ಇಲ್ಲಿ ಯಾರು ಕಳಿಸಿದ್ದಾರೆ ಅಂತ ಫರ್ಸ್ಟ್ ಅದನ್ನ ಹೇಳಿ ಅಂದರು. ಇವ ವಿದ್ಯಾಗಿರಿ ಬ್ರಾಂಚ್ ನ ಕ್ಲರ್ಕ್ ಕಳಿಸಿದ್ದಾರೆ ಅಂತ ಹೇಳಿದ. ಮ್ಯಾನೇಜರ್ ವಿದ್ಯಾಗಿರಿ ಬ್ರಾಂಚ್ ಗೆ ಫೋನ್ ಮಾಡಿ ಇನ್ನೊಮ್ಮೆ ಹಿಂಗ್ ಮಾಡಬೇಡಿ. ಬಿಟ್ ಕಾಯಿನ್ ಬಗ್ಗೆ ಗೊತ್ತಿಲ್ಲ ಅಂದ್ರೆ ಮುಚಗೊಂಡ ಸುಮ್ಮ ಕೂಡಬೇಕು ಆಯ್ತಾ ಅಂತ ವಾರ್ನ್ ಮಾಡಿದರು.

ಆ ಮೇಲೆ ಮಿತ್ರನಿಗೆ ಬಿಟ್ ಕಾಯಿನ್ ಅಂದ್ರೆ ಅದು ಆನ್ಲೈನ್ ನಲ್ಲಿ ಇರುತ್ತೆ. ಲಾಗಿನ್ ಆಗಬೇಕು. ಅದೊಂದು ದೊಡ್ಡ ತಲಿಬ್ಯಾನೀ. ನಾ ಹೇಳಿದರೂ ನಿಮಗೆ ತಿಳಿಯಲ್ಲ. ಈಗ ಇರುವ ಕಾಯಿನ್ ರಗಡ ಅದಾವ. ಅದು ಬಿಟ್ ಈ ಬಿಟ್ ಕಾಯಿನ್ ಉಸಾಬರಿಗೆ ಹೋಗಬೇಡಿ ತಲಿ ಹಾಪ್ ಆಗುತ್ತ ಅಂತ ಹೇಳಿದರು. ನಿಜ ಹೇಳಬೇಕೆಂದರೆ ಇದರ ಬಗ್ಗೆ ನನಗೂ ಇವತ್ತೇ ಗೊತ್ತಾಗಿದ್ದು. ಇದರೌನ್ ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಅಷ್ಟೂ ಮಿಕ್ಕಿ ನಿಮಗೆ ಬೇಕೆ ಬೇಕು ಅಂತ ಅನ್ನಿಸಿದರೆ ಪತ್ತಾರ್ ಅಂಗಡಿಗೆ ಹೋಗಿ ಬೆಳ್ಳಿ ಅಥವಾ ಬಂಗಾರದ್ದು ಮಾಡಿಸಿಕೊಳ್ಳಿ. ಮನೆಯಲ್ಲಿ ಇಟ್ಟು ಪೂಜೆ ಮಾಡಿ ಅಂತ ಮಿತ್ರನಿಗೆ ಅದರ ಫೋಟೋ ತೋರಿಸಿದರು. ಮಿತ್ರ, ಮ್ಯಾನೇಜರ್ ಗೆ ಕೈ ಮುಗಿದು ಬರ್ತೀನಿ ಅಂತ ಹೇಳಿ ಮನೆಗೆ ಬಂದ.

ನನಗೆ ಫೋನ್ ಮಾಡಿ ಲೇ ಮಗನ ಯಾವುದೋ ಬಿಟ್ ಕಾಯಿನೂ? ಬೊಗಳೆ ಬಿಡ್ತೀಯಾ? ಅಂತ ಕೇಳಿದ. ನೋಡು ಮಗನೇ ಸರಿಯಾಗಿ ಕೇಳಿಸಿಕೋ. ಬಿಟ್ ಕಾಯಿನ್ ಅಂದ್ರೆ ಕಿರಾಣಿ ಅಂಗಡಿಯಲ್ಲಿ ಕಿರಾಣಿ ತೊಗೊಂಡ ದುಡ್ಡು ಕೊಟ್ಟಾಗ, ಅಂಗಡಿ ಶೆಟ್ಟರು ಉಳಿದ ಚಿಲ್ಲರ್ ಮರಳಿ ಕೊಡುವಾಗ ಚಿಲ್ಲರ್  ಇಲ್ಲ ಅಂತ ಹೇಳಿ ಒಂದೆರಡು ರೂಪಾಯಿ ಕಮ್ಮಿ ಕೊಟ್ಟಿರುತ್ತಾರೆ. ಆ ನಂತರ ಮರಳಿ ಕೆಳೋದನ್ನೂ ನಾವು ಮರೆತು ಕಾಯಿನ್ ಬಿಟ್ಟು ಬಂದಿರುತ್ತೇವೆ. ಅದೇ ಬಿಟ್ ಕಾಯಿನ್ ಅಂತ ಹೇಳಿದೆ. ಮಿತ್ರ ಹೌದಾ? ನಾನು ಶೆಟ್ಟರ ಅಂಗಡಿಯಲ್ಲಿ ಆ ತರ ಅನೇಕ ಕಾಯಿನ್ ಬಿಟ್ ಬಂದಿದ್ದೇನೆ. ಈಗಲೇ ಹೋಗಿ ಕೇಳುತ್ತೇನೆ ಅಂತ ಶೆಟ್ಟರ ಅಂಗಡಿಗೆ ಹೊಂಟ ನಿಂತ. ಮುಂದೆ ಏನಾಗುತ್ತೋ?
---------

ಲೇಖಕರು:
ಶ್ರೀ ಮಧುಸೂದನ್ ಕುಲಕರ್ಣಿ, ಧಾರವಾಡ




Post a Comment (0)
Previous Post Next Post