ಹಾಸಿಗೆ ಇದ್ದಷ್ಟು ಕಾಲು ಚಾಚುವುದಲ್ಲ; ಹಾಸಿಗೆ ಹಿಗ್ಗಿದೆ ಎಂದು ಅಡ್ಡಾದಿಡ್ಡಿ ಮಲಗುವ ಹುಚ್ಚು!

✍️ ಬರಹ: ಶರಣು ಗೋಗಿ, ಶಿಕ್ಷಕರು

ಹಾಸಿಗೆ ಇದ್ದಷ್ಟು ಕಾಲು ಚಾಚುವುದಲ್ಲ; ಹಾಸಿಗೆ ಹಿಗ್ಗಿದೆ ಎಂದು ಅಡ್ಡಾದಿಡ್ಡಿ ಮಲಗುವ ಹುಚ್ಚು!

ನಮ್ಮ ಹಿರಿಯರು ಅನುಭವದಿಂದ ಹೇಳಿದ ಒಂದು ಜನಪ್ರಿಯ ಗಾದೆ ಮಾತಿದೆ: "ಹಾಸಿಗೆ ಇದ್ದಷ್ಟು ಕಾಲು ಚಾಚು". ಮೇಲ್ನೋಟಕ್ಕೆ ಇದೊಂದು ಅದ್ಭುತವಾದ ಆರ್ಥಿಕ ಪಾಠದಂತೆ ಕಾಣುತ್ತದೆ. ಅಂದರೆ, ನಮ್ಮ ಆದಾಯ ಎಷ್ಟಿದೆಯೋ ಅಷ್ಟರಲ್ಲೇ ನಾವು ಜೀವನ ಸಾಗಿಸಬೇಕು, ಮಿತಿಮೀರಿ ಖರ್ಚು ಮಾಡಬಾರದು ಎಂಬುದು ಇದರ ಸಾರಾಂಶ. ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ಮತ್ತು ಬದಲಾದ ಜೀವನಶೈಲಿಯಲ್ಲಿ ಈ ಗಾದೆಯ ಹಿಂದಿನ ಅರ್ಥವನ್ನು ನಾವು ತಪ್ಪಾಗಿ ಗ್ರಹಿಸಿದ್ದೇವೆ ಅಥವಾ ತಪ್ಪಾಗಿ ಅಳವಡಿಸಿಕೊಳ್ಳುತ್ತಿದ್ದೇವೆ ಎಂದೆನಿಸುತ್ತಿದೆ.

ಇಲ್ಲಿ "ಕಾಲು ಚಾಚುವುದು" ಎಂದರೆ ನಮ್ಮ ಖರ್ಚುಗಳು, ಮತ್ತು "ಹಾಸಿಗೆ" ಎಂದರೆ ನಮ್ಮ ಆದಾಯ. ಸಮಸ್ಯೆ ಇರುವುದು ನಮ್ಮ ಕಾಲಿನ ಅಳತೆಯಲ್ಲಿ ಅಲ್ಲ, ಬದಲಾಗಿ ನಾವು ಮಲಗುವ ಹಾಸಿಗೆಯ ಗಾತ್ರವನ್ನು ಅನಗತ್ಯವಾಗಿ ಹೆಚ್ಚಿಸಿಕೊಳ್ಳುವ ಹಂಬಲದಲ್ಲಿ!

ಈ ಲೇಖನದಲ್ಲಿ, ನಾವು ಮಾಡುತ್ತಿರುವ ಆರ್ಥಿಕ ತಪ್ಪುಗಳು, ಮಧ್ಯಮ ವರ್ಗದವರನ್ನು ಕಾಡುತ್ತಿರುವ 'ಅಪ್‌ಗ್ರೇಡ್' ಸಂಸ್ಕೃತಿ ಮತ್ತು ನಿಜವಾದ ಆರ್ಥಿಕ ಸ್ವಾತಂತ್ರ್ಯ (Financial Freedom) ಅಂದರೆ ಏನು ಎಂಬುದನ್ನು ಚರ್ಚಿಸೋಣ.

ಒಬ್ಬ ಮನುಷ್ಯನಿಗೆ ನೆಮ್ಮದಿಯಿಂದ ಮಲಗಲು ಒಂದು ಸಾಮಾನ್ಯ ದಿವಾನ ಅಥವಾ ಸಿಂಗಲ್ ಕಾಟ್ ಹಾಸಿಗೆ ಸಾಕಾಗುತ್ತದೆ. ಮದುವೆಯಾದ ನಂತರ ಕ್ವೀನ್ ಸೈಜ್ ಹಾಸಿಗೆ ಬೇಕಾಗಬಹುದು. ಇದು ಅಗತ್ಯ. ಆದರೆ ಇಲ್ಲಿ ಯಾರೂ 'ಹಾಸಿಗೆಯ ಸೈಜ್' ಅಥವಾ ಅಗತ್ಯದ ಬಗ್ಗೆ ಮಾತನಾಡುವುದಿಲ್ಲ. ಎಲ್ಲರ ಗಮನ ಇರುವುದು "ನನ್ನ ಹತ್ತಿರ ದೊಡ್ಡ ಹಾಸಿಗೆ ಇದೆ, ಹಾಗಾಗಿ ನಾನು ಕೈ ಕಾಲುಗಳನ್ನು ಎಲ್ಲೆಂದರಲ್ಲಿ ಚಾಚಲೇಬೇಕು" ಎನ್ನುವ ಮನಸ್ಥಿತಿಯ ಕಡೆಗೆ.

ದೊಡ್ಡ ಹಾಸಿಗೆಯನ್ನು ಕೊಂಡುಕೊಳ್ಳುವ ಶಕ್ತಿ ಇದೆ ಎಂದ ಮಾತ್ರಕ್ಕೆ, ಅದರಲ್ಲಿ ಅನಗತ್ಯವಾಗಿ ಉರುಳಾಡಬೇಕೆ? ಈ ಪ್ರಶ್ನೆಯೇ ನಮ್ಮ ಇಂದಿನ ಚರ್ಚೆಯ ಮೂಲ. ನೀವು ದೊಡ್ಡ ಹಾಸಿಗೆ (ಹೆಚ್ಚಿನ ಆದಾಯ) ಪಡೆದಾಗ, ಅದರಲ್ಲಿಯೂ ಮಿತವಾಗಿ ಮಲಗುವುದನ್ನು ಕಲಿಯದಿದ್ದರೆ, ಜಗತ್ತಿನ ಯಾವ ಹಾಸಿಗೆಯೂ ನಿಮಗೆ ಸಾಲದಾಗುತ್ತದೆ.

ಇದನ್ನು ಇನ್ನೂ ಸರಳವಾಗಿ, ನಮ್ಮೆಲ್ಲರಿಗೂ ಅರ್ಥವಾಗುವ 'ಕಾರಿನ' ಉದಾಹರಣೆಯೊಂದಿಗೆ ನೋಡೋಣ.

ನೀವು ಕೆಲಸಕ್ಕೆ ಸೇರಿದ ಹೊಸತರಲ್ಲಿ ನಿಮ್ಮ ಸಂಬಳಕ್ಕೆ ತಕ್ಕಂತೆ ಒಂದು ’ಸೆಲೆರಿಯೊ’ (Celerio) ಕಾರು ಕೊಳ್ಳುವ ಶಕ್ತಿ ನಿಮಗಿರುತ್ತದೆ. ಅದು ನಿಮ್ಮ ಅಗತ್ಯವನ್ನೂ ಪೂರೈಸುತ್ತದೆ. ಆದರೆ, ಸಮಾಜದ ಕಣ್ಣಿಗೆ ಅಥವಾ ಬ್ಯಾಂಕ್ ನೀಡುವ ಸಾಲದ ಆಫರ್ ನ ಆಸೆಗೆ ಬಿದ್ದು, ನೀವು ಸಾಲ ಮಾಡಿ 'ಸೆಲ್ಟೋಸ್' (Seltos) ಕೊಳ್ಳುತ್ತೀರಿ.

ಕೆಲವು ವರ್ಷಗಳ ನಂತರ ನಿಮ್ಮ ಸಂಬಳ ಹೆಚ್ಚಾಗುತ್ತದೆ, ಬಡ್ತಿ ಸಿಗುತ್ತದೆ. ಆಗ ಆರಾಮವಾಗಿ ಸೆಲ್ಟೋಸ್ ಕಾರನ್ನು ನಿರ್ವಹಿಸುವ ಶಕ್ತಿ ಬರುತ್ತದೆ. ಆದರೆ ಮನುಷ್ಯನ ಮನಸ್ಸು ಅಲ್ಲಿಗೆ ನಿಲ್ಲುವುದಿಲ್ಲ. "ನನ್ನ ಸಂಬಳ ಹೆಚ್ಚಾಗಿದೆ ಅಲ್ವಾ? ನಾನೇಕೆ ಇನ್ನೂ ಅದೇ ಹಳೆಯ ಕಾರಿನಲ್ಲಿ ಓಡಾಡಲಿ?" ಎಂದುಕೊಂಡು, ಲೋನ್ ಹಾಕಿ 'ಫಾರ್ಚುನರ್' (Fortuner) ಬುಕ್ ಮಾಡುತ್ತೀರಿ.

ಇಲ್ಲಿ ಒಂದು ಕ್ಷಣ ನಿಂತು ಯೋಚಿಸಿ. ನಿಜವಾಗಿಯೂ ನಿಮಗೆ ಫಾರ್ಚುನರ್ ಅಗತ್ಯವಿತ್ತೇ? ಉದಾಹರಣೆಗೆ ಬೆಂಗಳೂರಿನಂತಹ ಟ್ರಾಫಿಕ್ ತುಂಬಿದ ನಗರದಲ್ಲಿ, ಜಯನಗರದಿಂದ ಎಂ.ಜಿ ರೋಡ್‌ಗೆ ಹೋಗಲು ಸೆಲೆರಿಯೋ ಕಾರು ಸಾಕಾಗುವುದಿಲ್ಲವೇ? ಸೆಲೆರಿಯೋದಲ್ಲಿ ಹೋಗುವವನು ಮತ್ತು ಫಾರ್ಚುನರ್ ನಲ್ಲಿ ಹೋಗುವವನು ಇಬ್ಬರೂ ಟ್ರಾಫಿಕ್ ಸಿಗ್ನಲ್ ನಲ್ಲಿ ಒಟ್ಟಿಗೆ ನಿಲ್ಲುತ್ತಾರೆ. ಇಬ್ಬರೂ ಸೇರುವುದು ಒಂದೇ ಆಫೀಸ್ ಅಥವಾ ಮಾಲ್ ಗೆ. ಆದರೂ, ಕೇವಲ "ನನ್ನ ಸಂಬಳ ಜಾಸ್ತಿ ಆಗಿದೆ" ಎಂಬ ಒಂದೇ ಕಾರಣಕ್ಕೆ ಮನೆ, ಕಾರು, ಮಕ್ಕಳ ಶಾಲೆ, ಪ್ರವಾಸ ಹೀಗೆ ಎಲ್ಲವನ್ನೂ 'ಅಪ್‌ಗ್ರೇಡ್' ಮಾಡುತ್ತಾ ಹೋಗುವುದು ಎಷ್ಟು ಸರಿ? ಇದನ್ನೇ 'ಲೈಫ್‌ಸ್ಟೈಲ್ ಇನ್ಫ್ಲೇಶನ್' (Lifestyle Inflation) ಎನ್ನುತ್ತಾರೆ. ಆದಾಯ ಹೆಚ್ಚಿದ ಕೂಡಲೇ ಅದಕ್ಕೆ ಸಮನಾಗಿ ಅಥವಾ ಅದಕ್ಕಿಂತ ಹೆಚ್ಚಾಗಿ ಖರ್ಚುಗಳನ್ನು ಏರಿಸಿಕೊಳ್ಳುವ ಅಪಾಯಕಾರಿ ಚಟವಿದು.

'ಗೋಲ್ಡನ್ ಹ್ಯಾಂಡ್‌ಕಫ್ಸ್' (Golden Handcuffs)

ನನ್ನದೇ ಒಬ್ಬ ಗೆಳೆಯನ ಜೀವನದ ಒಂದು ನೈಜ ಉದಾಹರಣೆಯನ್ನು ಹಂಚಿಕೊಳ್ಳುತ್ತೇನೆ. ನನ್ನ ಗೆಳೆಯ ಮತ್ತು ಕೆಲವು ಸ್ನೇಹಿತರು ಒಂದೇ ಸಮಯದಲ್ಲಿ ವೃತ್ತಿಜೀವನ ಆರಂಭಿಸಿದರು. ಕಾಲೇಜು ದಿನಗಳಲ್ಲಿ ಅವವೆಲ್ಲರೂ ಸಮಾನ ಮನಸ್ಕರು. ಆದರೆ ಸಮಯ ಕಳೆದಂತೆ ಅವರ ದಾರಿಗಳು ಬದಲಾದವು.

ನನ್ನ ಗೆಳೆಯ ಮತ್ತು ಅವನ ಕೆಲವು ಮಿತ್ರರು, ತಮ್ಮ ಅಗತ್ಯಗಳನ್ನು ಮಿತವಾಗಿ ಇಟ್ಟುಕೊಂಡರು. ಅವರಿಗೆ ಇಂದಿಗೂ ಹಳೆಯ ಬೈಕು ಅಥವಾ ಸೆಕೆಂಡ್ ಹ್ಯಾಂಡ್ ಮಾರುತಿ ಕಾರುಗಳೇ ಸಾಕು. ಅವು ಅವರನ್ನು ಸುರಕ್ಷಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಿಸುತ್ತವೆ. ಆದರೆ, ಅವನ ಮತ್ತೆ ಕೆಲವು ಸ್ನೇಹಿತರು ಹಾಗೆ ಮಾಡಲಿಲ್ಲ. ಅವರು ಐಟಿ ಕ್ಷೇತ್ರದಲ್ಲಿ ಅಥವಾ ಕಾರ್ಪೊರೇಟ್ ವಲಯದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ, ಕೈತುಂಬಾ ಸಂಬಳವೂ ಇದೆ. ಬಹುತೇಕ ಅವರ ಎಲ್ಲರ ಮನೆಯಲ್ಲಿಯೂ ಬೆಲೆಬಾಳುವ ಐಷಾರಾಮಿ ಕಾರುಗಳಿವೆ. ಕೋಟಿ ಬೆಲೆಬಾಳುವ ಮನೆಗಳಿವೆ. ಮೇಲ್ನೋಟಕ್ಕೆ ಅವರು 'ಶ್ರೀಮಂತರು'. ಆದರೆ ವಾಸ್ತವವೇ ಬೇರೆ.

ಇತ್ತೀಚೆಗೆ, ನನ್ನ ಸ್ನೇಹಿತನಿಗೆ ಕಾರ್ಪೊರೇಟ್ ಕೆಲಸದ ಒತ್ತಡ ಸಾಕಾಗಿ, ಕೆಲಸ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಕೃಷಿಗೆ (Farming) ಇಳಿಯಬೇಕು ಅನ್ನಿಸಿತು. ಅವನು ತಕ್ಷಣ ರಾಜೀನಾಮೆ ನೀಡಿ ತೋಟಕ್ಕೆ ಹೋದನು. ಅವನಿಗೆ ಯಾವುದೇ ಆರ್ಥಿಕ ಸಂಕೋಲೆಗಳು, ಅಂದರೆ ದೊಡ್ಡ ಇಎಂಐ (EMI) ಗಳ ಭಯ ಇರಲಿಲ್ಲ. ಅವನ ಹಳೆಯ ಮಾರುತಿ ಕಾರಿಗೆ ತಿಂಗಳಿಗೆ ಇಂತಿಷ್ಟೇ ಕಂತು ಕಟ್ಟಬೇಕು ಎಂಬ ಒತ್ತಡ ಇರಲಿಲ್ಲ. ಆದರೆ, ಅವನ ಆ 'ಶ್ರೀಮಂತ' ಮಿತ್ರರಿಗೆ ಈ ಸ್ವಾತಂತ್ರ್ಯ ಇಲ್ಲ. ಅವರಿಗೂ ಕೆಲಸದ ಒತ್ತಡವಿದೆ, ಅವರಿಗೂ ಹಳ್ಳಿ ಸೇರಿ ಕೃಷಿ ಮಾಡುವ ಅಥವಾ ನೆಮ್ಮದಿಯ ಜೀವನ ನಡೆಸುವ ಆಸೆ ಇದೆ. ಆದರೆ ಅವರು ಕೆಲಸ ಬಿಡುವಂತಿಲ್ಲ. ಕಾರಣ? ತಿಂಗಳ ಒಂದನೇ ತಾರೀಕು ಬಂತೆಂದರೆ ಲಕ್ಷಾಂತರ ರೂಪಾಯಿ ಇಎಂಐ ಕತ್ತಿಗೆ ಉರುಳಿನಂತೆ ಕಾಯುತ್ತಿರುತ್ತದೆ. ಅವರ ಐಷಾರಾಮಿ ಬಂಗಲೆಯ ಸಾಲ ತೀರಿಸಲು ಅವರು ಇಷ್ಟವಿಲ್ಲದಿದ್ದರೂ ಆ ಕೆಲಸದಲ್ಲಿ ಮುಂದುವರಿಯಲೇಬೇಕು.

ಇದನ್ನೇ "ಗೋಲ್ಡನ್ ಹ್ಯಾಂಡ್‌ಕಫ್ಸ್" (ಚಿನ್ನದ ಕೈಕೋಳ) ಎನ್ನುತ್ತಾರೆ. ಕೈಕೋಳ ಚಿನ್ನದ್ದೇ ಇರಬಹುದು, ಆದರೆ ಅದು ನಿಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಎಂದ ಮೇಲೆ ಅದರ ಮೌಲ್ಯವೇನು?

ಕಾರಿನ ವಿಷಯ ಬಿಡಿ, ಮನೆಯ ವಿಷಯಕ್ಕೆ ಬರೋಣ. ಎಷ್ಟೋ ಜನರಿಗೆ 1 ಬಿಎಚ್‌ಕೆ (1BHK) ಮನೆ ಧಾರಾಳವಾಗಿ ಸಾಕಾಗುತ್ತದೆ. ಇನ್ನು ಕೆಲವರಿಗೆ 2 ಬಿಎಚ್‌ಕೆ ಸಾಕು. ಆದರೆ, ಪಕ್ಕದ ಮನೆಯವರು ಡ್ಯುಪ್ಲೆಕ್ಸ್ ಕಟ್ಟಿದ್ದಾರೆ ಎಂದೋ, ಅಥವಾ ಬ್ಯಾಂಕ್ ನವರು ಸಾಲ ಕೊಡಲು ಸಿದ್ಧರಿದ್ದಾರೆ ಎಂದೋ 3-4 ಬೆಡ್‌ರೂಮ್‌ಗಳ ದೊಡ್ಡ ಬಂಗಲೆಗಳನ್ನು ಕಟ್ಟಿಸುತ್ತಾರೆ.

ಮನೆಯಲ್ಲಿರುವುದು ಗಂಡ-ಹೆಂಡತಿ ಮತ್ತು ಒಂದು ಮಗು. ಆ 3 ಖಾಲಿ ಬೆಡ್‌ರೂಮ್‌ಗಳಲ್ಲಿ ದೂಳು ಹಿಡಿಯುತ್ತದೆಯೇ ಹೊರತು ಯಾರೂ ಮಲಗುವುದಿಲ್ಲ. ಆದರೆ ಆ ಖಾಲಿ ಕೋಣೆಗಳಿಗೂ ನೀವು ಬಡ್ಡಿ ಸಮೇತ ಸಾಲ ಕಟ್ಟುತ್ತಿರುತ್ತೀರಿ. ನಿಮ್ಮ ನೆಮ್ಮದಿಯ ನಿದ್ದೆಯನ್ನು ಕೆಡಿಸುವ ದೊಡ್ಡ ಬಂಗಲೆಗಿಂತ, ನೆಮ್ಮದಿ ನೀಡುವ ಪುಟ್ಟ ಮನೆ ಎಷ್ಟೋ ಲೇಸಲ್ಲವೇ? 

"ದೊಡ್ಡದು ಎಂದರೆ ಉತ್ತಮ" (Bigger is Better) ಎಂಬ ಭ್ರಮೆಯಿಂದ ನಾವು ಹೊರಬರಬೇಕಿದೆ. ಹಣಕಾಸಿನ ಶಿಸ್ತು ಮತ್ತು 25% ನಿಯಮ ಹಾಗಾದರೆ ನಾವು ಬದುಕುವುದೇ ಬೇಡವೇ? ಕಾರು, ಮನೆ ಆಸೆ ಪಡುವುದು ತಪ್ಪೇ? ಖಂಡಿತ ಅಲ್ಲ. ಆಸೆ ಪಡುವುದು ತಪ್ಪಲ್ಲ, ಆದರೆ ಅತಿಯಾಸೆ ಮತ್ತು ಲೆಕ್ಕಾಚಾರವಿಲ್ಲದ ಆಸೆ ತಪ್ಪು. ನೀವು ಬೈಕ್‌ನಲ್ಲಿ ಓಡಾಡುತ್ತಿದ್ದರೆ, ಮಳೆ-ಬಿಸಿಲಿನಿಂದ ರಕ್ಷಣೆ ಪಡೆಯಲು ಒಂದು ಕಾರು ಕೊಳ್ಳುವುದು ಅತ್ಯಗತ್ಯ. ಅದರಲ್ಲಿ ಅರ್ಥವಿದೆ. ಆದರೆ, ಕಾರು ಕೊಳ್ಳುವಾಗ ನಿಮಗೊಂದು ಮಿತಿ (Limit) ಇರಲಿ.

ಹಣಕಾಸು ತಜ್ಞರ ಪ್ರಕಾರ, "ನಿಮ್ಮ ಕಾರಿನ ಬೆಲೆಯು ನಿಮ್ಮ ವಾರ್ಷಿಕ ಆದಾಯದ 25% ಕ್ಕಿಂತ ಹೆಚ್ಚಿರಬಾರದು". ಉದಾಹರಣೆಗೆ, ನಿಮ್ಮ ವಾರ್ಷಿಕ ಆದಾಯ 10 ಲಕ್ಷವಿದ್ದರೆ, ನೀವು 2.5 ಲಕ್ಷದ ಸೆಕೆಂಡ್ ಹ್ಯಾಂಡ್ ಕಾರು ಅಥವಾ ಡೌನ್ ಪೇಮೆಂಟ್ ಕಟ್ಟಿ ಕಡಿಮೆ ಸಾಲದ ಕಾರು ಕೊಳ್ಳುವುದು ಉತ್ತಮ. ಆದರೆ 10 ಲಕ್ಷ ಆದಾಯ ಇರುವವರು 20 ಲಕ್ಷದ ಕಾರು ಕೊಂಡರೆ, ಅವರ ಭವಿಷ್ಯದ 5-6 ವರ್ಷಗಳ ದುಡಿಮೆ ಕೇವಲ ಆ ಕಾರಿಗಾಗಿ ಮೀಸಲಾಗುತ್ತದೆ.

ಸಾಲ ಮಾಡುವುದರಲ್ಲಿ ಎರಡು ವಿಧಗಳಿವೆ:

ಒಳ್ಳೆಯ ಸಾಲ (Good Debt): ಬಿಸಿನೆಸ್ ಮಾಡಲು, ಕೃಷಿ ಭೂಮಿ ಅಭಿವೃದ್ಧಿಪಡಿಸಲು, ಅಥವಾ ಮೌಲ್ಯ ಹೆಚ್ಚಾಗುವ ಆಸ್ತಿ (Assets) ಮಾಡಲು ಸಾಲ ಮಾಡುವುದು ಬುದ್ಧಿವಂತಿಕೆ. ಇದು ನಿಮ್ಮ ಜೇಬಿಗೆ ಹಣ ತಂದು ಹಾಕುತ್ತದೆ.

ಕೆಟ್ಟ ಸಾಲ (Bad Debt): ಐಫೋನ್ (iPhone) ಕೊಳ್ಳಲು, ಐಷಾರಾಮಿ ಕಾರು ಕೊಳ್ಳಲು, ಅಥವಾ ದುಬಾರಿ ವೆಕೇಶನ್ ಹೋಗಲು ಸಾಲ ಮಾಡುವುದು ಮೂರ್ಖತನ. ಇದು ನಿಮ್ಮ ಜೇಬಿನಿಂದ ಹಣವನ್ನು ಕದಿಯುತ್ತದೆ.

ಅಂತಿಮವಾಗಿ ಹೇಳುವುದಿಷ್ಟೇ, ಹಾಸಿಗೆ ದೊಡ್ಡದಿದೆ ಎಂದು ಕಾಲು ಚಾಚುವ ಬದಲು, ಆ ಹಾಸಿಗೆಯಲ್ಲಿ ಹಾಯಾಗಿ ಮಲಗುವುದನ್ನು ಕಲಿಯಿರಿ. ನಿಮ್ಮ ಆದಾಯ ಹೆಚ್ಚಾದಾಗ, ನಿಮ್ಮ ಜೀವನಶೈಲಿಯನ್ನು (Lifestyle) ಬದಲಿಸುವ ಬದಲು, ನಿಮ್ಮ ಉಳಿತಾಯ ಮತ್ತು ಹೂಡಿಕೆಯನ್ನು (Investments) ಹೆಚ್ಚಿಸಿಕೊಳ್ಳಿ. ನಾಳೆ ಏನಾದರೂ ಹೆಚ್ಚು ಕಡಿಮೆಯಾಗಿ ಕೆಲಸ ಹೋದರೆ, ಅಥವಾ ನಿಮಗೇ ಕೆಲಸ ಮಾಡಲು ಬೇಸರವಾದರೆ, "ನನ್ನ ಹತ್ತಿರ ಇನ್ನು ೧೦ ವರ್ಷ ಜೀವನ ಸಾಗಿಸುವಷ್ಟು ಹಣವಿದೆ, ನನಗೆ ಯಾರ ಹಂಗಿಲ್ಲ" ಎಂದು ಹೇಳುವ ತಾಕತ್ತು ಇರುತ್ತದೆಯಲ್ಲ, ಅದೇ ನಿಜವಾದ ಶ್ರೀಮಂತಿಕೆ. ಅದೇ ನಿಜವಾದ ಯಶಸ್ಸು. ಜಿಪುಣರಾಗಿರಿ ಎಂದು ಹೇಳುತ್ತಿಲ್ಲ, ಆದರೆ ವಿವೇಕಿಗಳಾಗಿರಿ. ಬಿಎಂಡಬ್ಲ್ಯೂ ಕಾರಿನಲ್ಲಿ ಕುಳಿತು ಸಾಲದ ಚಿಂತೆಯಲ್ಲಿ ಮಗ್ನವಾಗುವ ಬದಲು, ಮಾರುತಿ ಕಾರಿನಲ್ಲಿ ನೆಮ್ಮದಿಯಿಂದ ಪಯಣಿಸಿ.

ಆಲೋಚಿಸಿ, ನಿಮ್ಮ ಹಾಸಿಗೆಯನ್ನು ನೀವೇ ಕಿರಿದು ಮಾಡಿಕೊಳ್ಳುತ್ತಿದ್ದೀರಾ ಅಥವಾ ಇರುವ ಹಾಸಿಗೆಯಲ್ಲಿ ರಾಜನಂತೆ ಬದುಕುತ್ತಿದ್ದೀರಾ?

You May Also Like 👇

Loading...
Post a Comment (0)
Previous Post Next Post