ಸಕಾಲದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳದಿರುವುದು ತಾಪತ್ರಯಕ್ಕೆ ಕಾರಣವಾಗುವುದಿಲ್ಲವೇ?

ಸಕಾಲದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳದಿರುವುದು ತಾಪತ್ರಯಕ್ಕೆ ಕಾರಣವಾಗುವುದಿಲ್ಲವೇ?


ಈ ಭೂಮಿಯಮೇಲೆ ನಿಸರ್ಗ ತನ್ನದೇ ಆದ ರಹಸ್ಯವನ್ನು ಹೊಂದಿದೆ. ಸಮಯಕ್ಕೆ ಅನುಸಾರ ಋತುಮಾನಗಳು ತಮ್ಮಷ್ಟಕ್ಕೆ ತಾವೇ ಬಂದು ಹೋಗುತ್ತಿರುತ್ತವೆ. ಇನ್ನು ಕೆಲವೊಂದು ಬಾರಿ ನಿಸರ್ಗ ಅವಾಂತರಗಳನ್ನೇ ಸೃಷ್ಟಿಸಿ ಬಿಡುತ್ತದೆ. ಅತಿವೃಷ್ಟಿ , ಅನಾವೃಷ್ಟಿ, ಭೂಕಂಪ ಹೀಗೆ ಹಲವು ಸವಾಲುಗಳು ಎದುರಾಗುತ್ತಿರುತ್ತವೆ.  ನಿಸರ್ಗವನ್ನು ಅರ್ಥ ಮಾಡಿಕೊಳ್ಳಲು ಮನುಷ್ಯ ಎಷ್ಟೇ ಮುಂದುವರೆದರೂ ನಿಸರ್ಗದ ರಹಸ್ಯವನ್ನು ಬೇಧಿಸಲು ಸಾಧ್ಯವಾಗುತ್ತಿಲ್ಲ. ಆದರೂ ಮಾನವ ನಿಸರ್ಗದ ರಹಸ್ಯವನ್ನು ಬೇಧಿಸುವ ಪ್ರಯತ್ನ ಮಾಡುತ್ತ, ತನ್ನ ಬುದಿವಂತಿಕೆಯನ್ನು ಪ್ರದರ್ಶನ ಮಾಡುತ್ತಲೇ ಬಂದಿದ್ದಾನೆ. ಆದರೂ ಸಹ ಕೆಲವೊಂದು ಬಾರಿ ನಿಸರ್ಗದ ಸವಾಲುಗಳ ಮುಂದೆ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುತ್ತವೆ. 

ಅಂದಹಾಗೆ, ಈ 2020 ನೇ ವರ್ಷದಲ್ಲಿ ಸಾಲು ಸಾಲು ಸಮಸ್ಯೆಗಳು ಮತ್ತು ಸವಾಲುಗಳನ್ನೇ ಎದುರಿಸುವಂತಾಗಿದೆ. ಒಂದೆಡೆ ಕರೋನ ಮಹಾಮಾರಿ ಇಡೀ ಜಗತ್ತನ್ನೇ ನಲುಗಿಸಿತು, ಮತ್ತೊಂದಡೆ, ಎಡೆಬಿಡದೆ ಸುರಿದ ಮಹಾ ಮಳೆ.  ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮಳೆಯ ಪ್ರಮಾಣ ಶೇಕಡ 16 ರಷ್ಟು ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ವಾಡಿಕೆಯಂತೆ 882 ಮಿಮೀ ಮಳೆಯಾಗಿತ್ತಿತ್ತು, ಆದರೆ ಈ ಬಾರಿ 991 ಮಿಮೀ ಮಳೆ ಸುರಿದು ದಾಖಲೆಯಾಗಿದೆ.

ಇದರಿಂದ ಹಲವಾರು ಅವಾಂತರಗಳ ಸೃಷ್ಟಿಯಾದವು. ಉದಾ: ತಲಕಾವೇರಿಯಲ್ಲಿ ಗುಡ್ಡ ಕುಸಿದ ಪರಿಣಾಮ ಅರ್ಚಕರ ಕುಟುಂಬದ ಸದಸ್ಯರು ತೀರಿಹೋದರು, ರಾಜ್ಯದ ಜನ-ಜೀವನ ಅಸ್ತವ್ಯಸ್ಥವಾಯಿತು, ಜೀವಗಳ ಹಾನಿಯ ಜೊತೆ ರೈತನ ಬೆಳೆ ಹಾನಿಯಾಯಿತು. ಕೈಗೆ ಬಂದ ಹೆಸರು ,ಉದ್ದ, ತೊಗರಿ ಇನ್ನಿತರ ಬೆಳೆಗಳು ನೀರು ನಿಂತು ಹಾಳಾದವು. ಇದೊಂದು ರೀತಿ ರೈತರಿಗೆ ಹಸಿ ಬರವೇ ಸರಿ.

ಕಳೆದವರ್ಷ ಅತ್ಯಂತ ಕಡಿಮೆ ಮಳೆಯಾಗಿತ್ತು. ರಾಜ್ಯದ ಸುಮಾರು ತಾಲ್ಲೂಕುಗಳು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿತ್ತು. ರೈತನು ಬೆಳೆದ ಬೆಳೆಗಳು ಒಣಗಿ ಹೋಗಿದ್ದವು, ನಿರೀಕ್ಷೆಯ ಫಸಲು ಬಾರದೆ ರೈತರು ಕಂಗಾಲಾಗಿದ್ದರು. ಮಳೆ ಇಲ್ಲದೆ ಜನರಿಗೆ ಕುಡಿಯಲು ನೀರಿಲ್ಲದಂತಾಗಿತ್ತು, ಜಾನುವಾರಗಳಿಗೆ ಮೇವು ಇಲ್ಲದಂತಾಗಿತ್ತು, ಕೆರೆ, ಭಾವಿ ಬೋರವೆಲ್ಲುಗಳು ಬತ್ತಿದ್ದವು, ಕುಡಿಯುವ ನೀರಿಗಾಗಿ ರಾಜ್ಯದಾದ್ಯಂತ ಹಾಹಾಕಾರವೇ ಸೃಷ್ಟಿಯಾಗಿತ್ತು. ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ವಾರಕ್ಕೆ ಒಂದು ಬಾರಿ ಕುಡಿಯುವ ನೀರನ್ನು ಪೂರೈಸಲಾಗುತ್ತಿತ್ತು. ಈ ಪರಿಸ್ಥಿತಿ ಬಹುತೇಕ ರಾಜ್ಯದ ಎಲ್ಲ ಭಾಗಗಳಲ್ಲಿ ತಲೆದೋರಿತ್ತು. ಇನ್ನು ಹಳ್ಳಿಗಳಲ್ಲಿ ಕಿಲೋಮೀಟರ್ಗಟ್ಟಲೆ ನಡೆದುಕೊಂಡು ಹೋಗಿ ದೂರದ ಭಾವಿಗಳಲ್ಲಿಯೋ , ಹಳ್ಳದಲ್ಲಿಯೋ ಜೀವ ಜಲಕ್ಕಾಗಿ ಹುಡುಕಾಡಿ ಪರದಾಡುವಂತ ಪರಿಸ್ಥಿತಿ ಇತ್ತು. ರಾಜ್ಯದ ಪ್ರಮುಖ ನದಿಗಳು ಸಹ ಬತ್ತಿ ಒಣಗಿ ಹೋಗಿದ್ದವು.

ಆಗ ಸರ್ಕಾರ ನೀರಿನ ಅಭಾವ ಇರುವ ಕಡೆ ಟ್ಯಾಂಕರ ಗಳ ಮೂಲಕ ಕುಡಿಯುವ ನೀರನ್ನು ಪೂರೈಸಿದರೂ, ಎಲ್ಲರಿಗೂ ಸರಿಯಾಗಿ ಹಂಚಿಕೆಯಾಗದ ಪರಿಣಾಮ ಜನ ಪರದಾಡುವಂತಾಗಿತ್ತು. ಟ್ಯಾಂಕರನ ಮೂಲಕ ನೀರು ಸರಬರಾಜು ಮಾಡುವುದಕ್ಕೆ ಸರ್ಕಾರ ಕೋಟಿ ಕೋಟಿ ಹಣ ವ್ಯಯ ಮಾಡಿತು, ಆದರೆ ಅದು ಶಾಶ್ವತ ಪರಿಹಾರವಾಗಲಿಲ್ಲ.

ಕೇಂದ್ರ ಸರ್ಕಾರ 'ಘರ್ ಘರ್ ಜಲ್' ಯೋಜನೆ ಯನ್ನು ಜಾರಿಗೊಳಿಸಿದೆ. ಅದರ ಉದ್ದೇಶ ಪ್ರತಿ ಮನಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವದಾಗಿದೆ. ಆದರೆ ಈ ಯೋಜನೆ ಅಷ್ಟು ವೇಗದಲ್ಲಿ ಅನುಷ್ಠಾನಕ್ಕೆ ಬರುತ್ತಿಲ್ಲ. ಹಲವು ಜಿಲ್ಲೆಗಳ ಪ್ರಗತಿಯನ್ನು ನೋಡಿದಾಗ ಕೊಪ್ಪಳ ಶೇಕಡಾ 99 ಪ್ರಗತಿಯನ್ನು ಹೊಂದಿ ಪ್ರಥಮ ಸ್ಥಾನದಲ್ಲಿದ್ದರ, ಶೇಕಡ 6 ಪ್ರಗತಿಯಲ್ಲಿರುವ ಉತ್ತರ ಕನ್ನಡ ಕೊನೆಯ ಸ್ಥಾನದಲ್ಲಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದು ಕುಡಿಯುವ ನೀರಿನ ಬೇಗೆಯನ್ನು ಪರಿಹರಿಸಲು ಪ್ರಯತ್ನಿಸಬೇಕಾಗಿದೆ.

ಭಾರತ ಸ್ವತಂತ್ರಗೊಂಡು ಏಳು ದಶಕಗಳು ಕಳೆದರು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರು ಪೂರೈಸುವ ಮತ್ತು ಶಾಶ್ವತ ವಾಗಿ ಪ್ರತಿಯೊಬ್ಬರ ಮನೆ ಮನೆಗೆ ನೀರು ದೊರೆಯುವಂತಾಗುತ್ತಿಲ್ಲ.

ಕರ್ನಾಟಕದ ಹಲವಾರು ಕಡೆ ಫ್ಲೋರೈಡ್ ಯುಕ್ತ ನೀರಿನ ಪ್ರಮಾಣ ಇದೆ. ಅದು ಕುಡಿಯಲು ಯೋಗ್ಯವಲ್ಲ. ಶುದ್ಧ ನೀರು ಸಿಗದೆ ಫ್ಲೋರೈಡ್ ಯುಕ್ತ ನೀರನ್ನು ಉಪಯೋಗಿಸಿದ ಎಷ್ಟೋ ಹಳ್ಳಿ ಪಟ್ಟಣ ಗಳಲ್ಲಿ ಹುಟ್ಟುವ ಮಕ್ಕಳು ರೋಗ-ರುಜಿನ ಗಳಿಗೆ ತುತ್ತಾಗುತ್ತಿದ್ದಾರೆ, ಅಂಗವಿಕಲಾಗಿ ಹುಟ್ಟುತ್ತಿದ್ದಾರೆ. ಈ ಅಶುದ್ಧ ನೀರನ್ನು ಕುಡಿಯುವ ಪರಿಣಾಮ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಕ್ಯಾನ್ಸರ ರೋಗಕ್ಕೂ ತುತ್ತಾಗುತ್ತಿದ್ದಾರೆ. 

ಸರಕಾರಗಳು ಎಷ್ಟೋ ಯೋಜನೆಗಳನ್ನು ತರುತ್ತಿವೆ, ಆದರೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇಂದು ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಕ್ಕೆ ಸಾಕಾಗುವಷ್ಟು ಅನುದಾನ ನೀಡುತ್ತಿದೆ. ಹಳ್ಳಿ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಇತ್ತೀಚೆಗೆ ಪ್ರಾರಂಭ ಮಾಡುತ್ತಿದ್ದಾರೆ . ಆದರೆ ರಾಜ್ಯದ ಎಷ್ಟೋ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಅಲ್ಲದೆ ನೀರಿನ ಸಮಸ್ಯೆ ಇರುವ ಎಷ್ಟೋ ಶಾಲೆಗಳಲ್ಲಿ ಶೌಚಾಲಯ ಇದ್ದರೂ  ಬಳಕೆಯಾಗುತ್ತಿಲ್ಲ. ಇದಕ್ಕೆಲ್ಲ ಕಾರಣ ನೀರಿನ ಸೌಲಭ್ಯ ಇಲ್ಲದಿರುವುದು.

ಇಷ್ಟೆಲ್ಲ ಸಮಸ್ಯೆಗಳು ತಲೆದೋರುತ್ತಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಕಾಲವಾದ ಮಳೆಗಾಲದಲ್ಲಿ ರಾಜ್ಯದಲ್ಲಿ ಈ ವರ್ಷ ಎಲ್ಲಾ ನದಿಗಳು ಮೈದುಂಬಿ ಹರಿಯುತ್ತಿವೆ. ಜಲಾಶಯಗಳು ಬರ್ತಿಯಾಗಿವೆ, ಇಂಥ ಸಂದರ್ಭ ದಲ್ಲಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತದೆ. ನೀರಿನ ಅಭಾವವಿರುವ ಪ್ರತಿಯೊಂದು ಕಡೆ ನದಿಯ ಅಕ್ಕ ಪಕ್ಕದ ಮತ್ತು ಸಲ್ಪ ದೂರವಿದ್ದರೂ ಸಹ ಅಂತಹ ಗ್ರಾಮ/ಪಟ್ಟಣಗಳಲ್ಲಿ ಕೆರೆಗಳನ್ನು ನಿರ್ಮಿಸಿ ಅವುಗಳಿಗೆ ಪೈಪಲೈನ್ ಗಳ ಮೂಲಕ ನೀರನ್ನು ತುಂಬಿಸಿ ಸಂಗ್ರಹ ಮಾಡಿಕೊಂಡು ಪುನಃ ಜಲ ಶುದ್ಧೀಕರಣ ಮಾಡಿ ಈ ಅಭಾವವನ್ನು ತಪ್ಪಿಸಬಹುದಾದ ಒಂದು ಯೋಜನೆಯನ್ನು ರೂಪಿಸಿ ಮನೆಮನೆಗೆ ನೀರನ್ನು ಪೂರೈಸಬಹುದು.

ಕೆರೆಗಳ ನಿರ್ಮಾಣದಿಂದ ಅಲ್ಲಿಯ ಸುತ್ತಲಿನ ಅಂತರ್ಜಲ ಹೆಚ್ಚುತ್ತದೆ. ಬತ್ತಿಹೋದ ಭಾವಿಗಳಲ್ಲಿ, ಬೋರ್ ವೆಲ್ ಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ. ಮುಂದೆ ಬೇಸಿಗೆಯಲ್ಲಿ ಉಂಟಾಗುವ ಆಭಾವ ಶಾಶ್ವತವಾಗಿ ತಪ್ಪಿಸಿದಂತಾಗುತ್ತದೆ. ಪ್ರತಿ ಬಾರಿ ವ್ಯಯವಾಗುವ ಸರ್ಕಾರದ ಹಣ ಉಳಿಸಿದಂತಾಗುತ್ತದೆ,

ಅಂದಿನ ಕಾಲದ ರಾಜಕಾರಣಿಗಳು ತಮ್ಮ ದೂರ ದೃಷ್ಟಿಯಿಂದ ರಾಜ್ಯದಲ್ಲಿ ಕನ್ನಂಬಾಡಿ, ಆಲಮಟ್ಟಿ, ಹಾರಂಗಿ, ಲಿಂಗನಮಕ್ಕಿ ಹೀಗೆ ಹಲವಾರು ಜಲಾಶಯಗಳು ನಿರ್ಮಿಸಿದ್ದಾರೆ. ಅದರ ಪರಿಣಾಮ ಇಂದು ರಾಜ್ಯದಲ್ಲಿ ನೀರಾವರಿ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿದ್ದೇವೆ. ಹರಿದು ಹೋಗುವ ನದಿಗಳಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಪ್ರಕೃತಿಯಿಂದ ನೈಸರ್ಗಿಕವಾಗಿ ದೊರೆಯುವ ಸಂಪತ್ತನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಅದರ ಪರಿಣಾದು ಇಂದು ಲಕ್ಷಾಂತರ ಹೆಕ್ಟೇರ್ ಭೂಮಿ ನೀರಾವರಿಯಿಂದ ಹಚ್ಚ ಹಸಿರಿನಿಂದ ಕೂಡಿದೆ.  ಇದರಿಂದ ರೈತನ ಬಾಳು ಹಸನಾಗಿದೆ, ಕುಡಿಯಲು ನೀರು ಪೂರೈಕೆಯಾಗುತ್ತಿದೆ, ಅಲ್ಲದೆ ವಿದ್ಯುತ್ ಉತ್ಪಾದನೆಯೂ ಕೂಡ ಆಗುತ್ತಿದೆ.

ಮಾನವನಿಗೆ ಬದುಕಲು ಆಹಾರ ಎಷ್ಟು ಮುಖ್ಯವೋ, ನೀರು ಕೂಡ ಅಷ್ಟೇ ಪ್ರಮುಖವಾಗಿರುವದರಿಂದ, ನೀರನ್ನು ಅತಿಯಾಗಿ ವ್ಯರ್ಥಮಾಡುವ ಬದಲು, ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಉಳಿಸುವಂತಾಗಬೇಕು. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದೇ ನಮ್ಮ ಆಶಯ.


ಲೇಖಕರು:
ಶ್ರೀ ರಂಗನಾಥ ಮರ್ಕಲ್, ಶಿಕ್ಷಕರು 
ಮಹಾತ್ಮಾ ಗಾಂಧಿ ಪ್ರೌಢಶಾಲೆ, ಚಿತ್ತಾಪುರ
Post a Comment (0)
Previous Post Next Post