ಶ್ರೀ ಕೃಷ್ಣ ಮತ್ತು ಸುಧಾಮನ ಕಥೆ

ಉಜ್ಜಯಿನಿಯಲ್ಲಿ ಸಾಂದೀಪನಿ ಮುನಿಯ ಆಶ್ರಮದಲ್ಲಿ ಶ್ರೀಕೃಷ್ಣ ಮತ್ತು ಸುಧಾಮ ಗುರುಕುಲ ಶಿಕ್ಷಣವನ್ನು ಪಡೆಯುತ್ತಿದ್ದರು.ಇಬ್ಬರೂ ಅನ್ಯೋನ್ಯ ಸ್ನೇಹಿತರಾಗಿದ್ದರು.ಒಮ್ಮೆ ಗುರುಕುಲದ ವಿದ್ಯಾರ್ಥಿಗಳು ಅರಣ್ಯಕ್ಕೆ ತೆರಳಿದ್ದರು. ಆಗ ಸುಧಾಮ ಗುರುಪತ್ನಿ ಕೊಟ್ಟಿದ್ದ ಅವಲಕ್ಕಿಯನ್ನು ಯಾರಿಗೂ ತಿಳಿಯದಂತೆ ತಾನು ತಿಂದನು. ಹಂಚಿಕೊಂಡು ತಿನ್ನಬೇಕೆಂಬ ಗುರುಕುಲದ ನಿಯಮಕ್ಕೆ ಇದು ವಿರುದ್ಧವಾಗಿತ್ತು. ಶ್ರೀಕೃಷ್ಣ ಇಷ್ಟಪಡುತ್ತಿದ್ದ ಅವಲಕ್ಕಿ. ಅವನಿಗೂ ಹಸಿವೆಯಾಗಿತ್ತು. ಅವನೊಂದಿಗೂ ಹಂಚಿಕೊಳ್ಳಲಿಲ್ಲ ಸುಧಾಮ.



ಗುರುಕುಲದಲ್ಲಿ ಶಿಕ್ಷಣವನ್ನು ಮುಗಿಸಿ ಇಬ್ಬರೂ ಅವರವರ ಊರಿಗೆ ಮರಳಿದರು. ಶ್ರೀಕೃಷ್ಣನು ದ್ವಾರಕೆಗೆ ಹಿಂತಿರುಗಿದನು. ಮುಂದೆ ದ್ವಾರಕೆಯ ರಾಜನಾದನು. ಅವನ ಮಹಾರಾಣಿ ರುಕ್ಮಿಣಿ.

ಸುಧಾಮನ ಮನೆಯಲ್ಲಿ ಬಡತನವಿತ್ತು. ಮದುವೆಯಾಗಿ ಮನೆತುಂಬಾ ಮಕ್ಕಳಾದರು. ಕುಟುಂಬವು ಹೊತ್ತಿನ ತುತ್ತಿಗೆ ಕಷ್ಟಪಡುತ್ತಿತ್ತು. ಆಗ ಅವನ ಮಡದಿ ಸುಶೀಲ "ನೀವು ಶ್ರೀ ಕೃಷ್ಣ ನಿಮ್ಮ ಗೆಳೆಯನೆಂದು ಹೇಳುತ್ತೀರಲ್ಲ ..ಅವನು ಬಹಳ ಶ್ರೀಮಂತನೆಂದೂ ಹೇಳುತ್ತಿರುವಿರಿ. ಅವನ ಬಳಿ ತೆರಳಿ ಸ್ವಲ್ಪ ಸಹಾಯ ಮಾಡುವಂತೆ ಯಾಚಿಸಬಾರದೇ.". ಎಂದಾಗ ಸುಧಾಮ ಒಂದುಕ್ಷಣ ಮೌನವಾಗಿ ಯೋಚಿಸಿದ. ಶ್ರೀಕೃಷ್ಣ ಮಿತ್ರನೇನೋ ಹೌದು.. ಆದರೂ ಅವನಲ್ಲಿ ಬಡತನದ ಸಂಗತಿ ತಿಳಿಸಿ ಸಹಾಯ ಕೇಳುವುದು ಸರಿಕಾಣದು. ಆದರೂ ಮಿತ್ರನನ್ನು ಒಮ್ಮೆ ಭೇಟಿಯಾದಂತೆ ಆಯಿತು ಎಂದು ಹೊರಟನು. ಹೊರಡುವಾಗ ಏನು ಕೊಂಡೊಯ್ಯಲಿ ಶ್ರೀಕೃಷ್ಣನಿಗೆ ಎಂದು ಯೋಚಿಸುತ್ತಿದ್ದಾಗ.." ಶ್ರೀಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯನ್ನು ಕೊಂಡೊಯ್ಯಿರಿ ..."ಎಂದು ಮನೆಯಲ್ಲಿದ್ದ ನಾಲ್ಕು ಹಿಡಿ ಅವಲಕ್ಕಿಯನ್ನು ಹಳೆಯ ವಸ್ತ್ರದಲ್ಲಿ ಗಂಟು ಹಾಕಿ ಸುಧಾಮನ ಕೈಗಿತ್ತಳು. ಸುಧಾಮ ಅವಲಕ್ಕಿಯ ಗಂಟನ್ನು ಹೆಗಲಿಗೆ ಹಾಕಿಕೊಂಡು ದ್ವಾರಕೆಯತ್ತ ನಡೆದನು.

ದ್ವಾರಕಾನಗರದ ದ್ವಾರದಲ್ಲಿ ಬಂದು ನಿಂತ ಸುಧಾಮ ದ್ವಾರಪಾಲಕರಲ್ಲಿ ತನ್ನ ಪರಿಚಯ ಹೇಳಿಕೊಂಡನು.ಬಡತನವು ಎದ್ದುಕಾಣುವಂತಿದ್ದ ಅವನ ಹರಕುಬಟ್ಟೆಯನ್ನು ಕಂಡ ದ್ವಾರಪಾಲಕರು "ಕುಚೇಲ "ಎಂದು ಅವನನ್ನು ಅಪಹಾಸ್ಯ ಮಾಡುತ್ತಾರೆ. ಆದರೂ ಬೇಸರಿಸದ ಸುಧಾಮ ನಗುತ್ತಲೇ ಬೆನ್ನು ಹಾಕಿ ಹಿಂದಿರುಗುತ್ತಾನೆ.

ತನ್ನ ಅರಮನೆಯ ಮಾಳಿಗೆಯಲ್ಲಿದ್ದ ಶ್ರೀಕೃಷ್ಣನಿಗೆ ಸುಧಾಮ ಕಾಣುತ್ತಾನೆ.ಕೂಡಲೇ ತನ್ನ ಸೇವಕರನ್ನು ಕರೆದು ರಥದಲ್ಲಿ ದ್ವಾರದತ್ತ ಧಾವಿಸಿ... ಸುಧಾಮನನ್ನು ಪ್ರೀತಿಯಿಂದ ಆದರಿಸಿ, ಅಲಂಕೃತ ರಥದಲ್ಲಿ ಕುಳ್ಳಿರಿಸಿ ಅರಮನೆಗೆ ಕರೆತರುತ್ತಾನೆ. ತನ್ನ ಸಿಂಹಾಸನದಲ್ಲಿ  ಕುಳ್ಳಿರಿಸಿ ಬ್ರಾಹ್ಮಣನಿಗೆ ತಕ್ಕಉಪಚಾರವನ್ನು ಮಾಡುತ್ತಾನೆ. ಶ್ರೀಕೃಷ್ಣನು ಸುಗಂಧಭರಿತ ಜಲದಿಂದ ಸುಧಾಮನ ಪಾದತೊಳೆಯುತ್ತಾನೆ.

ರುಕ್ಮಿಣಿಗೆ ತನ್ನ ಗೆಳೆಯ ಸುಧಾಮನನ್ನು ಪರಿಚಯಿಸುತ್ತಾನೆ ಶ್ರೀಕೃಷ್ಣ.ಶ್ರೀಕೃಷ್ಣ ಸುಧಾಮ ಇಬ್ಬರೂ ತಮ್ಮ ಗುರುಕುಲದ ಜೀವನದ ಸಂಗತಿಗಳನ್ನು ಮೆಲುಕುಹಾಕುತ್ತಾರೆ.ಮಾತನಾಡುತ್ತಾ ಶ್ರೀಕೃಷ್ಣನು .."ನೀನು ನನಗೆ ಏನೋ ತಂದಿರಬೇಕಲ್ಲ.." ಎಂದು ಸುಧಾಮನ ಕಂಕುಳಲ್ಲಿದ್ದ ಬಟ್ಟೆಯ ಗಂಟನ್ನು ನೋಡಿ ಹೇಳುತ್ತಾನೆ..ಗೆಳೆಯನ ಶ್ರೀಮಂತಿಕೆಯ ವೈಭವದ ಎದುರು ಈ ಅವಲಕ್ಕಿಯ ಗಂಟನ್ನು ಹೇಗೆ ಕೊಡಲಿ ಎಂದು ಸುಧಾಮ.." ಇಲ್ಲ..ಏನೂ ಇಲ್ಲ.. "ಎಂದು ಅಡಗಿಸುವ ಪ್ರಯತ್ನ ಮಾಡುತ್ತಾನೆ.ಆಗ ಶ್ರೀಕೃಷ್ಣನೇ ಮೆಲ್ಲನೆ ಎಳೆದು ತೆಗೆದುಕೊಂಡು ವಸ್ತ್ರದ ಗಂಟನ್ನು ಬಿಚ್ಚಿ ಅವಲಕ್ಕಿಯನ್ನು ಕಂಡು .."ಓಹೋ.. ನನಗೆ ಬಲು ಪ್ರಿಯವಾದ ಅವಲಕ್ಕಿ..." ಎಂದು ಒಂದು ಹಿಡಿ ತಿನ್ನುತ್ತಾನೆ.ಇನ್ನೊಂದು ಹಿಡಿ ಅವಲಕ್ಕಿಯನ್ನು ರುಕ್ಮಿಣಿಗೆ ತಿನ್ನಲು ಕೊಟ್ಟಾಗ ಅವಳು ತಡೆದು..."ಪ್ರಿಯ, ಪ್ರಭುವೇ..,ಈ ಒಂದು ಹಿಡಿ ಅವಲಕ್ಕಿಯು ಇವನನ್ನು ಈ ಜನ್ಮದಲ್ಲಿಯೂ ಮುಂದಿನ ಜನ್ಮದಲ್ಲಿಯೂ ಶ್ರೀಮಂತನನ್ನಾಗಿ ಮಾಡುತ್ತದೆ..."ಎಂದು ಹೇಳಿದಳು.


ಸುಧಾಮ ತನ್ನ ಗೆಳೆಯನಲ್ಲಿ ಏನನ್ನೂ ಕೇಳಲೇಯಿಲ್ಲ. ಅವನ ಸತ್ಕಾರ, ಗೆಳೆತನದ ಪ್ರೀತಿಯ ಮುಂದೆ ತನ್ನ ಬಡತನವನ್ನು ಹೇಳಿಕೊಳ್ಳಲು ಮನಸ್ಸಾಗಲಿಲ್ಲ ಸುಧಾಮನಿಗೆ.ಶ್ರೀಕೃಷ್ಣನ ಅರಮನೆಯಲ್ಲಿ ಒಂದು ದಿನ ಉಳಿದುಕೊಂಡು ನಂತರ ತನ್ನ ಮನೆಗೆ ಮರಳಿದ ಸುಧಾಮ. ಸುಧಾಮ ಏನೂ ಹೇಳದಿದ್ದರೂ ಎಲ್ಲವನ್ನೂ ಅರಿತುಕೊಂಡ ಶ್ರೀಕೃಷ್ಣ ತನ್ನ ಸೇವಕರನ್ನು ಕಳುಹಿಸಿ ಸುಂದರವಾದ ಅರಮನೆಯೊಂದನ್ನು ಸುಧಾಮನ ಗುಡಿಸಲಿನ ಪಕ್ಕದಲ್ಲಿ ನಿರ್ಮಿಸುತ್ತಾನೆ. ವಜ್ರವೈಢೂರ್ಯಗಳನ್ನು ಸಂಪತ್ತನ್ನು ಸೃಷ್ಟಿಸಿರುತ್ತಾನೆ. ಸುಧಾಮನ ಹೆಂಡತಿ ಮಕ್ಕಳು ಬೆಲೆಬಾಳುವ ಬಟ್ಟೆಗಳನ್ನು ಆಭರಣಗಳನ್ನು ಧರಿಸುತ್ತಾರೆ..

ತನ್ನೂರಿಗೆ ಹಿಂದಿರುಗಿ ಸುಧಾಮ ನೋಡಿದಾಗ ತನ್ನ ಕಣ್ಣನ್ನೇ ನಂಬದಾದನು. ತನ್ನ ಗುಡಿಸಲನ್ನು ಬಿಟ್ಟು ಪಕ್ಕದಲ್ಲಿ ಸುಂದರ ಅರಮನೆ,ಸುಂದರ ನಗರಿಯೊಂದು ನಿರ್ಮಾಣವಾಗಿತ್ತು. ಮಡದಿ ಸುಶೀಲ ಮಕ್ಕಳು ಓಡೋಡಿ ಬಂದು ಶ್ರೀಕೃಷ್ಣನ ಮಹಿಮೆಯನ್ನು ಕೊಂಡಾಡಿದರು. ಸುಧಾಮ ನಡೆದುದೆಲ್ಲವನ್ನು ಮಡದಿ ಮಕ್ಕಳಿಗೆ ತಿಳಿಸಿ ಶ್ರೀಕೃಷ್ಣನ ಯೋಗಮಾಯೆಯನ್ನು ಕೊಂಡಾಡಿದನು.

ಹಿಂದೆ ಗುರುಕುಲದಲ್ಲಿ ಅವಲಕ್ಕಿಯನ್ನು ಶ್ರೀಕೃಷ್ಣನೊಡನೆ ಹಂಚಿಕೊಳ್ಳದೆ ಒಬ್ಬನೇ ತಿಂದು ನಿಯಮ ಮೀರಿದ್ದರಿಂದ ಬಂದಿದ್ದ ಬಡತನದ  ಶಾಪ ಅವಲಕ್ಕಿಯನ್ನು ಶ್ರೀಕೃಷ್ಣನಿಗೆ ಹಂಚಿದ್ದರಿಂದ ಕಳೆದುಹೋಯಿತು..ವೈಭವ ಪ್ರಾಪ್ತಿಯಾಯಿತು ..ಶ್ರೀಮಂತಿಕೆಯನ್ನು ಕೇವಲ ತನ್ನ ಇಂದ್ರಿಯ ತೃಪ್ತಿಗಾಗಿ ಬಳಸಿದರೆ ಅದು ಅವಸಾನಕ್ಕೆ,ದಾರಿದ್ರ್ಯಕ್ಕೆ ಕಾರಣವಾಗುತ್ತದೆ.ಶ್ರಿಕೃಷ್ಣನ ಸೇವೆಗೆ ಬಳಸಿದರೆ ಉನ್ನತಿಗೆ ಕಾರಣವಾಗುತ್ತದೆ.

ಶ್ರೀಕೃಷ್ಣ ದಯಪಾಲಿಸಿದ ವೈಭೋಗವನ್ನು ಶ್ರೀಕೃಷ್ಣನ ಸೇವೆಗೆ ಬಳಸಿಕೊಂಡು ,ಅದರಲ್ಲೇ ಸುಖಕಂಡುಕೊಂಡು ಸುಧಾಮ ಬದುಕಿಬಾಳಿದನು.

You May Also Like 👇

Loading...
Post a Comment (0)
Previous Post Next Post