ಪೆನ್ - ಕಸಗಳ ಬಗೆಗಿನ ಈ ವಿದ್ಯಾರ್ಥಿಗಳ ಪರಿಸರ ಕಾಳಜಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?


ಪೆನ್ - ಕಸಗಳ ಬಗೆಗಿನ ಈ ವಿದ್ಯಾರ್ಥಿಗಳ ಪರಿಸರ ಕಾಳಜಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?

- ಸಂತೋಷ ಕೋಡಿ, ಶಿಕ್ಷಕರು

ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದೆ ನಾವು ನೀವೆಲ್ಲಾ ಓದ್ತಿದ್ದಾಗ ಪೆನ್ ಲ್ಲಿ ಶಾಯಿ ಖಾಲಿ ಆಯ್ತು ಅಂದರೆ ಅದರಲ್ಲಿ ಇಂಕ್ ನ ಕಡ್ಡಿ ಬದಲಾಗ್ತಿತ್ತೇ ಹೊರತು ಪೆನ್ ಬದಲಾಗ್ತಿರಲಿಲ್ಲ. ಅರ್ಧಕ್ಕೆ ನಿಂತ ಇಂಕಿನ ಕಡ್ಡಿಯ ತುದಿ ತೆಗೆದು ಊದೋದು, ಶಾಯಿ ತಂದು ನಾವೇ ರಿಫಿಲ್ ಮಾಡೋದು, ಪಟ್ ಪಟ್ ಅಂತ ಬಡಿದು ಅರ್ಧಕ್ಕೆ ನಿಂತ ಶಾಯಿಯನ್ನು ಮುಂದೋಡಿಸುವುದು, ತೆಂಗಿನ ಎಣ್ಣೆ ಕಡ್ಡಿಯ ಹಿಂದೆ ತುಂಬಿ ಸ್ವಲ್ಪನೂ ಶಾಯಿ ಉಳಿಸದೇ ಹಿಂಡಿ ತೆಗೆಯೋದು ಇಂತಹವೆಲ್ಲಾ ಪ್ರಯೋಗಗಳು ಹಣದ ಬೆಲೆ ತಿಳಿಸುವುದರ ಜೊತೆ ವಸ್ತುವನ್ನು ಪರಿಪೂರ್ಣವಾಗಿ ಬಳಸುವ ಪಾಠವನ್ನೂ ಕಲಿಸುತ್ತಿದ್ದವು. ಈಗ ಕಾಲ ಬದಲಾಗಿದೆ. ರಿಫಿಲ್ ಬದಲಾಯಿಸುವುದಿರಲಿ, ಸ್ವಲ್ಪ ಹಿಡಿಯದ ಪೆನ್ ಇದ್ದರೂ ಮಗು ಬಿಸಾಡಿ ಬಿಡುತ್ತೆ. ಮಕ್ಕಳ ತಪ್ಪು ಅನ್ನುವುದಕ್ಕಿಂತ ಆ ಪೆನ್ನಿನ ವಾಸ್ತವ ಬೆಲೆ ಅವನಿಗೆ ಅರಿವಿಲ್ಲದಿರುವುದು ಕಾರಣ ಇರಬಹುದು. ಆದರೆ ಯಾವುದೇ ವಸ್ತುವಿನ ಬಳಕೆಯ ಪ್ರಮಾಣ ಹೆಚ್ಚಿದಂತೆ ಭೂಮಿ ತಾಯಿ ಹೊರುವ ಕಸದ ಪ್ರಮಾಣವೂ ಏರಿಕೆಯಾಗುವ ಗಂಭೀರ ಪರಿಣಾಮ ಇದ್ದದ್ದೆ.

ಇವತ್ತು ನನಗೊಂದು ಆಶ್ಚರ್ಯ ಅನ್ನುವುದಕ್ಕಿಂತ ಸಂತೋಷದ ಕ್ಷಣ ನಮ್ಮ ಶಾಲೆಯಲ್ಲಿ ಕಾದಿತ್ತು. ಪರೀಕ್ಷೆ ಮುಗಿಸಿ ಬೇಸಿಗೆ ರಜೆಗಾಗಿ ಮನೆ ಕಡೆ ಹೊರಟಿದ್ದ 8 ನೇ ತರಗತಿಯ 4 ವಿದ್ಯಾರ್ಥಿಗಳು ಬೆಳಿಗ್ಗೆಯೇ ದೊಡ್ಡ ಕವರ್ ನಲ್ಲಿ ಏನೋ ಇಟ್ಟುಕೊಂಡು ಸದ್ದು ಮಾಡುತ್ತಾ ತಮ್ಮ ಸ್ನೇಹಿತರೊಂದಿಗೆ ನನ್ನ ಮನೆ ಎದುರು ಪ್ರತ್ಯಕ್ಷರಾಗಿದ್ದರು. ಬಂದವರ ಕಣ್ಣಲ್ಲಿ ದೊಡ್ಡದೊಂದು ಕಾರ್ಯ ಸಾಧಿಸಿದ ತೃಪ್ತಿ ಇತ್ತು! ಬಂದವರೇ ತಾವು ಸಂಗ್ರಹಿಸಿದ ವಸ್ತುವಿನ ರಾಶಿಯನ್ನು ನೆಲಕ್ಕೆ ಸುರಿದರು! ಬರೋಬ್ಬರಿ 4000ದಷ್ಟು ಬಳಸಿ ಬಿಸಾಡಿದ ಪೆನ್ ಗಳು! ಅದರಲ್ಲಿ ಪೆನ್ ನ ಟಾಪ್ ಬೇರೆ, ಒಂದೇ ಕಂಪೆನಿಯ ಪೆನ್ ಗಳು ಬೇರೆ, ರಿಫಿಲ್ ಬೇರೆ. ನನಗೆ ಅವರಿಗಿರುವ ಜಾಗೃತಿಯ ಕಾಳಜಿಗೆ ಮಾತೇ ಹೊರಡಲಿಲ್ಲ. 

ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಿದ ನನ್ನ ಆ ನಾಲ್ಕು ಮಾತುಗಳು

ಐದಾರು ತಿಂಗಳ ಹಿಂದೆ ಒಮ್ಮೆ ಅವರ ತರಗತಿಗೆ ಹೋಗಿದ್ದಾಗ ನೆಲದ ಮೇಲೆ ಬಿದ್ದ ಪೆನ್ ನೋಡಿ ಪ್ರಕೃತಿ ಮೇಲೆ ಅದರಿಂದಾಗುವ ದುಷ್ಪರಿಣಾಮ - ಆಹಾರವೆಂದು ತಿಳಿದು ಪೆನ್ ನ ಸಣ್ಣ ಭಾಗ ತಿಂದು ಸಾಯುವ ಪಕ್ಷಿಗಳು, ತನ್ನ ಆಕಾರ ಮತ್ತು ಹಗುರತನದಿಂದ ಪೆನ್ ನ ಬಿಡಿ ಭಾಗಗಳು ಬಹುಬೇಗ ಮಳೆಯ ಮೂಲಕ ಸಮುದ್ರ/ನದಿ ಸೇರಿ ಅಲ್ಲಿನ ಜೀವ ಸಂಕುಲಗಳಿಗಾಗುವ ಅನಾಹುತದ ಬಗ್ಗೆ ಹೇಳಿದ ಅಸ್ಪಷ್ಟ ನೆನಪಾಯಿತು. ಅದನ್ನು ಸುಖಾ ಸುಮ್ಮನೆ ಕೇಳಿಸಿಕೊಂಡು ಮರೆಯುವ ಕಾರ್ಯ ಮಾಡದೆ, ಸ್ವಯಂ ಕಾರ್ಯಾಚರಣೆಗೆ ಇಳಿದ ಸಂಜನಾ, ಪೂಜಾ, ಹರ್ಷಿತ್ ಮತ್ತು ರಾಕೇಶ್ - ನಮ್ಮ ವಸತಿ ಶಾಲೆಯ ಪ್ರತಿ ಮಗುವೂ ಬಳಸಿ ಬಿಸಾಡಿದ ಪೆನ್ ಸಂಗ್ರಹಿಸಲು ಶುರು ಮಾಡಿದ್ದರು. ಅವರ ಸ್ನೇಹಿತರು ಹೇಳುವ ಪ್ರಕಾರ ಸಂಜೆ ಆಟಕ್ಕಿಂತ ಮೊದಲು ಕ್ಯಾಂಪಸ್ ನ ಒಂದು ರೌಂಡ್ ಹೊಡೆಯುವುದನ್ನ ಅಭ್ಯಾಸ ಮಾಡಿಕೊಂಡಿದ್ದರು, ಅದು ಎಷ್ಟರ ಮಟ್ಟಿಗೆ ಅಭ್ಯಾಸ ಆಗಿತ್ತು ಅಂದರೆ ಮನೆಗೆ ತೆರಳುವ ಕೊನೆ ನಿಮಿಷದಲ್ಲೂ ಕಣ್ಣಿಗೆ ಬಿದ್ದ, ಬಿಸಾಡಿದ ಪೆನ್ ತೆಗೆದಿರಿಸಿ ಕೊಟ್ಟು ಹೋಗಿದ್ದರು. ಯಾರ ಒತ್ತಾಯವೂ ಇಲ್ಲದೇ, ಸ್ವಯಂ ಜಾಗೃತಿಯಿಂದ, ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಮಾಡಿದ ಇವರ ಕಾರ್ಯದೆದುರು ಅಕ್ಷರಷಃ ನಾನು ಸಣ್ಣವನಾಗಿಬಿಟ್ಟೆ! ಭೂಮಿಯ ಭವಿಷ್ಯದ ಮುಂದಿನ ಆಶಾಕಿರಣ ಇಂತಹ ಕಾಳಜಿಯ ಪುಟ್ಟ ಮನಸ್ಸುಗಳೇ ಅಲ್ಲವಾ?? 

ನಾಲ್ವರಿಗೂ ಖುಷಿಯಿಂದ ಬೆನ್ನುತಟ್ಟಿ ಹಾರೈಕೆಯ ಮಾತುಗಳ ಬರೆದು ಉತ್ತಮ ಪುಸ್ತಕವೊಂದು ನೀಡಿದೆ. ಪುಸ್ತಕ ಸ್ವೀಕರಿಸುವಾಗ ಆ ಕಣ್ಣುಗಳಲ್ಲಿಕಂಡ ಏನೋ ಮಹತ್ತರವಾದುದು ಸಾಧಿಸಿದ ತೃಪ್ತಿಯ ಕಾಂತಿ ಮಾತ್ರ ನನ್ನ ಮನಸ್ಸಲ್ಲಿ ಹಾಗೆಯೇ ಅಚ್ಚೊತ್ತಿದೆ.

ಕೊನೆಯ ಮಾತು

ಸ್ನೇಹಿತರೇ, ಸಾಧ್ಯವಾದರೆ ಈ ಪೋಸ್ಟ್ ನ್ನು ಹಂಚಿಕೊಳ್ಳಿ. ಈ ವಿದ್ಯಾರ್ಥಿಗಳಿಂದ ಸಮಾನ ಕಾಳಜಿಯ ಇನ್ನಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾದರೂ ಸಾಕಷ್ಟು ಪೆನ್ ಕಸ ಗಳು ಸಮುದ್ರ/ನದಿ ಸೇರುವುದು ತಪ್ಪಲಿದೆ. ನಮ್ಮಲ್ಲಿ ಓದುವ 400 ವಿದ್ಯಾರ್ಥಿಗಳಿಂದ 4000 ಪೆನ್ ಕಸ ಗಳು ಬರೀ 5-6 ತಿಂಗಳಲ್ಲಿ ಉತ್ಪತ್ತಿಯಾಗುವುದಾದರೆ, ನಮ್ಮ ರಾಜ್ಯ ಒಂದನ್ನೇ ತೆಗೆದುಕೊಂಡರೂ ಅದರಲ್ಲಿ ಓದುವ ಒಟ್ಟು ವಿದ್ಯಾರ್ಥಿಗಳಿಂದ ಉತ್ಪತ್ತಿಯಾಗುವ ಈ ಕಸ ಸರಿಯಾಗಿ ವಿಲೇವಾರಿ ಆಗದಿದ್ದರೆ ಇನ್ನೆಷ್ಟು ಈ ಪೆನ್ ಕಸಗಳು ಭೂಮಿಯನ್ನು ಮಲಿನ ಮಾಡಬಹುದು ಲೆಕ್ಕ ಹಾಕಿ.

ಬದಲಾವಣೆ ಯಾವಾಗಲೂ ಸಣ್ಣದರಿಂದನೇ ಆರಂಭವಾಗುತ್ತದೆ. ಆದರೆ ಆ ಬದಲಾವಣೆ ನಿಷ್ಕಲ್ಮಷ ಹೃದಯದ ಮನಸ್ಸಿನಿಂದ ಆರಂಭವಾದರೆ ಅದು ಇನ್ನಷ್ಟು ಪರಿಶುದ್ಧ!
Post a Comment (0)
Previous Post Next Post