ಕಲಿಕಾ ಚೇತರಿಕೆ ಕಾರ್ಯಕ್ರಮದ ಹಿನ್ನೆಲೆ, ಅದರ ರೂಪುರೇಷೆ, ಮತ್ತು ಗುರಿ-ಉದ್ದೇಶಗಳು

ಕಲಿಕಾ ಚೇತರಿಕೆ ಕಾರ್ಯಕ್ರಮದ ಹಿನ್ನೆಲೆ

ಕೋವಿಡ್ 19 ಸಾಂಕ್ರಾಮಿಕ ಜಾಗತಿಕವಾಗಿ ಹರಡಿರುವ ಹಿನ್ನೆಲೆಯಲ್ಲಿ 2019-2020 ಮತ್ತು 2020-2021 ನೇ ಸಾಲಿನಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆದಿರುವುದಿಲ್ಲ ಹಾಗೂ 2021-2022 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ತಡವಾಗಿ ಪ್ರಾರಂಭಗೊಂಡಿದೆ. ಈ ವರೆಗೆ ಸೇತುಬಂಧ, ಪರ್ಯಾಯ ಶೈಕ್ಷಣಿಕ ಯೋಜನೆ, ವಿದ್ಯಾಗಮ, ಸಂವೇದಗಳಂತಹ ಕಾರ್ಯಕ್ರಮಗಳನ್ನು ಅಳವಡಿಸಲಾಗಿದ್ದರೂ ಸತತ 2 ಶೈಕ್ಷಣಿಕ ವರ್ಷಗಳಲ್ಲಿ ವಿದ್ಯಾರ್ಥಿಗಳು ಸರಿಯಾಗಿ ಶಾಲೆಗೆ ಹಾಜರಾಗದೇ ಇದ್ದುದರಿಂದ ಹಿಂದಿನ ಎರಡು ತರಗತಿಗಳ ಕಲಿಕಾ ಸಾಮರ್ಥ್ಯಗಳ ಕಲಿಕೆಯಲ್ಲೂ ಹಿನ್ನಡೆ ಉಂಟಾಗಿರುವುದು ಕಂಡುಬಂದಿದೆ.

ಕಲಿಕಾ ಚೇತರಿಕೆ ಕಾರ್ಯಕ್ರಮದ ಹಿನ್ನೆಲೆ, ಅದರ ರೂಪುರೇಷೆ, ಮತ್ತು ಗುರಿ-ಉದ್ದೇಶಗಳು

ಕೋವಿಡ್‌ನಿಂದ ಉಂಟಾಗಿರುವ ಕಲಿಕ ಹಿನ್ನಡೆಯನ್ನು ಹೊರತುಪಡಿಸಿ, ಪ್ರಸ್ತುತ ಪ್ರಾಥಮಿಕ ಶಾಲೆಯಲ್ಲಿನ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮೂಲಪಠ್ಯವನ್ನು ಓದುವ ಮತ್ತು ಗ್ರಹಿಸುವ ಸಾಮರ್ಥ್ಯ ಹಾಗೂ ಅಂಕಿಗಳೊಂದಿಗೆ ಮೂಲಕ್ರಿಯೆಗಳಾದ ಸಂಕಲನ ಮತ್ತು ವ್ಯವಕಲನವನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಪಡೆದಿರುವುದಿಲ್ಲ ಎಂದು ಎನ್.ಇ.ಪಿ 2020 ರಲ್ಲಿ ಉಲ್ಲೇಖಿಸಿದೆ.

ಪ್ರಾಥಮಿಕ ಶಾಲೆಯಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯು ಬುನಾದಿ ಅಕ್ಷರ ಜ್ಞಾನ ಮತ್ತು ಸಂಖ್ಯಾಜ್ಞಾನವನ್ನು ಸಾಧಿಸುವುದು ಶಿಕ್ಷಣ ವ್ಯವಸ್ಥೆಯ ಪ್ರಥಮ ಆದ್ಯತೆಯಾಗಿರಬೇಕೆಂದು ಶಿಕ್ಷಣ ನೀತಿಯು ಪ್ರತಿಪಾದಿಸುತ್ತದೆ ಹಾಗೂ ಈ ಮೂಲಭೂತ ಕಲಿಕೆಯ ಅವಶ್ಯಕತೆಯನ್ನು ಮೊದಲು ಸಾಧಿಸಿದರೆ ಮಾತ್ರ ನೀತಿಯ ಉಳಿದ ಭಾಗವು ವಿದ್ಯಾರ್ಥಿಗಳಿಗೆ ಪ್ರಸ್ತುತವಾಗುತ್ತದೆ ಎಂದು ಅಭಿಪ್ರಾಯಿಸಿದೆ. 

ಆದ್ದರಿಂದ ಎಲ್ಲಾ ತರಗತಿಗಳಲ್ಲಿಯೂ (1 ರಿಂದ 9) ಪ್ರಸ್ತುತ ತರಗತಿಯ ನಿರ್ದಿಷ್ಟ ಕಲಿಕಾಫಲಗಳೊಂದಿಗೆ ಬುನಾದಿ ಅಕ್ಷರ ಜ್ಞಾನ ಮತ್ತು ಸಂಖ್ಯಾಜ್ಞಾನಕ್ಕೆ ಸಂಬಂಧಿಸಿದ ಕಲಿಕಾಫಲಗಳನ್ನು ಅಂತರ್ಗತ ಗೊಳಿಸುವ ಅವಶ್ಯಕತೆ ಕಂಡುಬಂದಿದೆ.

ವಿಮರ್ಶಾತ್ಮಕ ಚಿಂತನೆ, ಆವಿಷ್ಕಾರ ಆಧಾರಿತ ಕಲಿಕೆಗೆ ಅವಕಾಶ ಕಲ್ಪಿಸಲು ಪ್ರತಿ ತರಗತಿಯಲ್ಲಿ ಪ್ರತಿ ವಿಷಯದಲ್ಲಿ ಪಠ್ಯಕ್ರಮದ ವಿಷಯವಸ್ತುವನ್ನು ಅದರಲ್ಲಿನ ಪ್ರಮುಖ ಆಂಶಗಳಿಗೆ (Core Competency) ಸೀಮಿತಗೊಳಿಸಿ ಪಠ್ಯಕ್ರಮವನ್ನು ಕಡಿಮೆ ಮಾಡುವಂತೆ ಶಿಕ್ಷಣ ನೀತಿಯು ಶಿಫಾರಸ್ಸು ಮಾಡಿರುತ್ತದೆ. ಹಿಂದಿನ ತರಗತಿಯಲ್ಲಿ ಪಡೆಯಬೇಕಾಗಿದ್ದ ಕೌಶಲ ಮತ್ತು ಜ್ಞಾನವನ್ನು ಗಳಿಸಲು ಅನುಕೂಲವಾಗುವಂತೆ, ಹಿಂದಿನ ತರಗತಿಗಳ ಪ್ರಮುಖ ಕಲಿಕಾ ಸಾಮರ್ಥ್ಯಗಳನ್ನೂ ಒಳಗೊಂಡಂತೆ ಪ್ರಸ್ತುತ ಓದುತ್ತಿರುವ ತರಗತಿಯ ಪ್ರಮುಖ ಕಲಿಕಾ ಸಾಮರ್ಥ್ಯಗಳು (Core Competency) ಹಾಗೂ ಬುನಾದಿ ಅಕ್ಷರ ಜ್ಞಾನ ಮತ್ತು ಸಂಖ್ಯಾಜ್ಞಾನಕ್ಕೆ ಸಂಬಂಧಿಸಿದ ಕಲಿಕಾಫಲಗಳನ್ನು ಅಂತರ್ಗತ ಗೊಳಿಸಿ 2022-23 ನೇ ಸಾಲಿಗೆ ವಿಷಯವಾರು, ತರಗತಿವಾರು ಪರಿಷ್ಕೃತ ಕಲಿಕಾಫಲಗಳನ್ನು ಒಳಗೊಂಡ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಿ ಕಲಿಕಾ ಚೇತರಿಕೆಯನ್ನು ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ 2022 - 2023 ಶೈಕ್ಷಣಿಕ ವರ್ಷದಲ್ಲಿ "ಕಲಿಕಾ ಚೇತರಿಕೆ" ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಿದೆ.

ಇದನ್ನೂ ಓದಿ: 

ಕಲಿಕಾಫಲಗಳ ಸಾಧನೆಯಲ್ಲಿನ ಅಂತರವನ್ನು ಕಡಿಮೆ ಮಾಡಲು ಸಂಕಲನಾತ್ಮಕ ಮತ್ತು ಕಂಠಪಾಠ ಕೌಶಲಗಳನ್ನು ಪರೀಕ್ಷಿಸುವ ಸಾಂಪ್ರದಾಯಿಕ ವಿಧಾನದ ಬದಲು ಸಾಮರ್ಥ್ಯ ಆಧಾರಿತ ಹಾಗೂ ಮಕ್ಕಳಲ್ಲಿ ಕಲಿಕೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಪೂರಕವಾಗಿ ಕೋರ್ ಸಾಮರ್ಥ್ಯಗಳನ್ನು ಹಾಗೂ ಉನ್ನತ ಹಂತದ ಕೌಶಲಗಳ ಸಾಧನೆಯನ್ನು ಪರೀಕ್ಷಿಸುವ ಮೌಲ್ಯಮಾಪನ ವಿಧಾನವನ್ನು ಅಳವಡಿಸುವ ಕುರಿತು ಎನ್.ಇ.ಪಿ 2020 ತಿಫಾರಸ್ಸು ಮಾಡಿದೆ.

ಈ ಹಿನ್ನೆಲೆಯಲ್ಲಿ ತರಗತಿವಾರು, ವಿಷಯಾವಾರು ನಿರ್ದಿಷ್ಟ ಕಲಿಕಾ ಫಲಗಳ ಅನ್ವಯ ಕಲಿಕೆಗಾಗಿ ಮೌಲ್ಯಮಾಪನ (Assessment for Learning) ಮತ್ತು ಕಲಿಕೆಯಾಗಿ ಮೌಲ್ಯಮಾಪನ (Assessment as Learning) ತಂತ್ರಗಳನ್ನು ಅಳವಡಿಸುವುದು ಸೂಕ್ತವಾಗಿದೆ. ಈ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಅವಶ್ಯಕತೆಯನ್ನು ಅರಿತು ಆದರನ್ವಯ ತರಗತಿ ಸಂವಹನವನ್ನು ನಡೆಸಲು ಒಂದು ವಿನೂತನ, ವಿಶೇಷ ಶೈಕ್ಷಣಿಕ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕಾಗಿದೆ.

ಎನ್.ಇ.ಪಿ. 2020 ಶಿಫಾರಸ್ಸಿನಲ್ಲಿ ತಿಳಿಸಿರುವ ಮೇಲ್ಕಂಡ ಎಲ್ಲಾ ಅಂಶಗಳನ್ನು ಒಳಗೊಂಡ ಸಮಗ್ರ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಿ, 2022-23 ಶೈಕ್ಷಣಿಕ ಸಾಲಿನಲ್ಲಿ ಆಳವಡಿಸುವುದರಿಂದ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಯಲ್ಲಿ ಉಂಟಾಗಿರುವ ಅಂತರವನ್ನು ಬೆಸೆಯಲು ಸಹಾಯಕವಾಗುತ್ತದೆ. ಈ ಹಿನ್ನೆಲೆಯಲ್ಲಿ ಬೋಧನಾ ಕಲಿಕಾ ಪ್ರಕ್ರಿಯೆಯ ಜೊತೆಯಲ್ಲಿಯೇ ಮೌಲ್ಯಮಾಪನವನ್ನು ಸಮನ್ವಯಗೊಳಿಸಿ, ಮೌಲ್ಯಮಾಪನ ಆಂಶಗಳ ದಾಖಲೆಯನ್ನು ನಿರ್ವಹಿಸುವ ಅವಶ್ಯಕತೆ ಇದೆ. 

ಆದ್ದರಿಂದ ವಿದ್ಯಾರ್ಥಿಯ ವೈಯಕ್ತಿಕ ಕೃತಿಸಂಪುಟವನ್ನು (Students' Individual Portfolio) ನಿರ್ವಹಿಸಲು ಅನುವಾಗುವಂತೆ perforated ಕಲಿಕಾ ಹಾಳೆಗಳನ್ನು ಹಾಗೂ ಅವುಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಮಾರ್ಗಸೂಚಿಗಳನ್ನು ಒಳಗೊಂಡ ಶಿಕ್ಷಕರ ಕೈಪಿಡಿಯನ್ನು ಸಿಧ್ಹಪಡಿಸಲಾಗಿದೆ.

ಕಾರ್ಯಕ್ರಮದ ಗುರಿ

1. ರಾಷ್ಟ್ರೀಯ ಶಿಕ್ಷಣ ನೀತಿ – 2020 ಆಶಯದಂತೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನವನ್ನು ಬೆಳೆಸುವುದು.

2. 2022-23 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸುವುದರ ಮೂಲಕ ರಾಜ್ಯಾದ್ಯಂತ ನಿರ್ದೇಶಿತ ಏಕರೂಪದ ಶೈಕ್ಷಣಿಕ ಪ್ರಕ್ರಿಯೆಯನ್ನು ಜಾರಿಗೊಳಿಸುವುದನ್ನು ನಿಶ್ಚಿತಗೊಳಿಸುವುದು 

3. ಎಲ್ಲಾ ವಿದ್ಯಾರ್ಥಿಗಳ ಭಾವನಾತ್ಮಕ ಅಗತ್ಯತೆಗಳ ಬೆಂಬಲಕ್ಕೆ ಗಮನ ಹರಿಸಿ ಕಲಿಕಾ ಪ್ರಕ್ರಿಯೆಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದನ್ನು ಖಾತ್ರಿ ಪಡಿಸುವುದು. 

4. ಎಲ್ಲಾ ವಿದ್ಯಾರ್ಥಿಗಳು ಬುನಾದಿ ಸಾಕ್ಷರತೆ, ಸಂಖ್ಯಾ ಜ್ಞಾನ ಮತ್ತು ಈ ಹಿಂದಿನ ಎರಡು ತರಗತಿಗಳಲ್ಲಿ ಅತ್ಯಗತ್ಯವಾಗಿ ಗಳಿಸಬೇಕಿದ್ದ ಕಲಿಕಾ ಫಲಗಳು ಹಾಗೂ ಪ್ರಸಕ್ತ ತರಗತಿಯ ಅತ್ಯಗತ್ಯ ಕಲಿಕಾ ಫಲಗಳನ್ನು ಸಾಧಿಸುವಂತೆ ಕ್ರಮವಹಿಸುವುದು. 

5. ಒಟ್ಟಾರೆಯಾಗಿ 2023-24 ನೇ ಶೈಕ್ಷಣಿಕ ಸಾಲಿನ ಆರಂಭದ ವೇಳೆಗೆ ಪ್ರತಿ ವಿದ್ಯಾರ್ಥಿಯು ತನ್ನ ತರಗತಿ ಮಟ್ಟದ ಕಲಿಕೆಯನ್ನು ಯಾವುದೇ ಅಡೆ ತಡೆ ಇಲ್ಲದೆ ಸಾಧಿಸಲು ಸಾಧ್ಯ ವಾಗುವಂತೆ ಸಜ್ಜುಗೊಳಿಸುವುದು.

ಕಲಿಕಾ ಫಲಗಳ ಮರು ಹೊಂದಾಣಿಕೆ

  • ಎರಡು ವರ್ಷಗಳಲ್ಲಿ ಉಂಟಾಗಿರುವ ಕಲಿಕಾ ಅಂತರವನ್ನು ಸರಿದೂಗಿಸಲು, ಪ್ರಸ್ತುತ ವರ್ಷಕ್ಕೆ ಕಲಿಕಾಫಲಗಳನ್ನು ಮರುಹೊಂದಾಣಿಕೆ ಮಾಡಲಾಗುವುದು ಪ್ರತಿ ತರಗತಿಗೆ ಹಿಂದಿನ ಎರಡು ವರ್ಷದ ಅತ್ಯಗತ್ಯ ಕಲಿಕಾಫಲಗಳು, ಪ್ರಸ್ತುತ ತರಗತಿಯ ಅಗತ್ಯ ಕಲಿಕಾಫಲಗಳು, ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನಕ್ಕೆ ಸಂಬಂಧಿಸಿದ ಕಲಿಕಾಫಲಗಳನ್ನು ಅಧರಿಸಿದ ಕಲಿಕಾ ಸಾಮಗ್ರಿಗಳನ್ನು ತಯಾರಿಸಿದೆ. .
  • ಕಲಿಕಾಫಲಗಳ ಮರು ಹೊಂದಾಣಿಕೆಯ ನಂತರ ತರಗತಿವಾರು ಹಾಗೂ ವಿಷಯವಾರು ಆಯ್ಕೆ ಮಾಡಿದ ಒಟ್ಟು ಕಲಿಕಾ ಫಲಗಳ ತರಗತಿ ಪ್ರಕ್ರಿಯೆಗಳನ್ನು ಅರ್ಥೈಸಲು ಶಿಕ್ಷಕರ (ಸುಗಮಕಾರರ) ಕೈಪಿಡಿಗಳನ್ನು ಸಿದ್ಧಪಡಿಸಿದೆ.

ಸಂಪನ್ಮೂಲಗಳ ಪರಿಚಯ ಮತ್ತು ಬಳಕೆ

1. ಶಿಕ್ಷಕರ (ಸುಗಮಕಾರರ) ಕೈಪಿಡಿ

  • 1 ರಿಂದ 9ನೇ ತರಗತಿಯ ವಿಷಯವಾರು ಮರುಹೊಂದಾಣಿಕೆ ಮಾಡಿರುವ ನಿರ್ದಿಷ್ಟ ಕಲಿಕಾಫಲವಾರು ಚಟುವಟಿಕೆಗಳನ್ನು ತಮ್ಮ ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ಹೇಗೆ ಸಮ್ಮಿಳಿತಗೊಳಿಸಿಕೊಳ್ಳಬಹುದು ಎಂಬ ಬಗ್ಗೆ ವಿವರಣೆ ನೀಡಿದೆ.
  • ಕಲಿಕಾ ಹಾಳೆಗಳನ್ನು ನಿರ್ವಹಿಸಲು ಶಿಕ್ಷಕರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಮಾದರಿಗಾಗಿ ಕೆಲವು ಚಟುವಟಿಕೆಗಳನ್ನು ಒದಗಿಸಿದೆ. 
  • ಪಠ್ಯಪುಸ್ತಕಗಳಲ್ಲಿನ ಕಲಿಕಾಂಶಗಳಿಗೆ ಪೂರಕವಾದ ಬುನಾದಿ ಸಾಮರ್ಥ್ಯಗಳನ್ನು ಬೆಳೆಸಲು ಅಗತ್ಯವಿರುವ ಬೋಧನಾ ವಿಧಾನ ಮತ್ತು ಚಟುವಟಿಕೆಗಳ ಮಾದರಿ ನೀಡಿದೆ.
  • ಈ ಚಟುವಟಿಕೆಗಳು ಶಿಕ್ಷಕರ ಕೈಪಿಡಿಯಲ್ಲಿ ನಿರ್ದೇಶಿಸಿರುವ ಬೋಧನಾ-ಕಲಿಕಾ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ಸಚಿಸಿರುವ 'ಕಲಿಕಾ ಹಾಳೆ'ಯ ಚಟುವಟಿಕೆಗಳಿಗೆ ಅಗತ್ಯವಿರುವಲ್ಲಿ ಸಂಪರ್ಕ ಕಲ್ಪಿಸಲಾಗಿದೆ.

ಇದನ್ನೂ ಓದಿ: 

2. ಕಲಿಕಾ ಹಾಳೆಗಳು

  • ಕಲಿಕಾ ಹಾಳೆಗಳು ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಚಟುವಟಿಕೆಗಳ ಗುಚ್ಛವನ್ನು ಒಳಗೊಂಡಿದೆ.
  • ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಕಲಿಕಾ ಅಂತರವನ್ನು ಗಮನದಲ್ಲಿಟ್ಟುಕೊಂಡು ತರಗತಿವಾರು ಹಾಗೂ ವಿಷಯವಾರು ಆಯ್ಕೆ ಮಾಡಿದ  ಕಲಿಕಾ ಫಲಗಳಿಗೆ ಹಲವಾರು ಚಟುವಟಿಕೆಗಳನ್ನು ನೀಡಿದೆ. 
  • ಈ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಸ್ವತಃ ಅಥವಾ ಶಿಕ್ಷಕರ ಸಹಾಯದಿಂದ ಕೈಗೊಳ್ಳಬೇಕೆಂಬ ಉದ್ದೇಶದಿಂದ ರಚಿಸಲಾಗಿದೆ.
  • ಪ್ರತಿ ಕಲಿಕಾಫಲಕ್ಕಾಗಿ ರಚಿತವಾಗಿರುವ ಚಟುವಟಿಕೆಗಳ ಗುಚ್ಛವನ್ನು ವಿದ್ಯಾರ್ಥಿಗಳಿಗೆ ನೀಡಿ ಕಲಿಕಾ ಪ್ರಕ್ರಿಯೆಯನ್ನು ಕೈಗೊಳ್ಳಲು ಕಲಿಕಾ ಹಾಳೆಗಳನ್ನು ಬಳಸಿಕೊಳ್ಳಬೇಕು. ಪ್ರತಿ ಕಲಿಕಾ ಫಲದ ನಂತರ ಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಸ್ತಾಪಿಸಲಾಗಿದ್ದು ನಮೂದಿಸಿರುವ ಸ್ತರಗಳನ್ನು ಬಳಸಿ ಕಲಿಕೆಯ ಮಟ್ಟವನ್ನು ದೃಢೀಕರಿಸಬೇಕು.

ಬಳಸಬಹುದಾದ ಹೆಚ್ಚುವರಿ ಸಂಪನ್ಮೂಲಗಳು

ಶಿಕ್ಷಕರು ಕಲಿಕಾ ಫಲ ಮತ್ತು ತರಗತಿ ಪ್ರಕ್ರಿಯೆಗಳ ಬಗ್ಗೆ ಡಿ.ಎಸ್.ಇ.ಆರ್.ಟಿ ಯಿಂದ ದೀಕ್ಷಾ ಪೋರ್ಟಲ್ ನಲ್ಲಿ ಎನ್.ಇ.ಪಿ. 2020 ಆಧಾರಿತ ಮಾಡ್ಯೂಲ್ ಗಳಲ್ಲಿ ಹಂತವಾರು (ಬುನಾದಿ ಹಂತ, ಪೂರ್ವಸಿದ್ಧತಾ ಹಂತ, ಮಾಧ್ಯಮಿಕ ಹಂತ ಮತ್ತು ಪ್ರೌಢಹಂತ) ಕಲಿಕಾಫಲಗಳನ್ನು ಅನುಕೂಲಿಸುವ ಮತ್ತು ಮೌಲ್ಯಾಂಕನ ಮಾಡುವ ಬಗ್ಗೆ ವಿವರವಾದ ಕೋರ್ಸ್ ಲಭ್ಯವಿದೆ. ಇದರಲ್ಲಿರುವ ಕಪ್‌ಲೆಟ್‌ಗಳು ಮತ್ತು ವಿಡಿಯೋಗಳಿಂದ ಶಿಕ್ಷಕರು ಹೆಚ್ಚುವರಿ ಮಾಹಿತಿ ಮತ್ತು ಅನುಭವ ಪಡೆಯಬಹುದಾಗಿದೆ. ಹಾಗೆಯೇ 2021-22 ನೇ ಸಾಲಿಗೆ ಸಿದ್ಧಪಡಿಸಿರುವ ಚಟುವಟಿಕೆ ಸಹಿತ ಪರ್ಯಾಯ ಶೈಕ್ಷಣಿಕ ಯೋಜನೆ, ಅಭ್ಯಾಸ ಪುಸ್ತಕಗಳು ಮತ್ತು ಇತರ ಶೈಕ್ಷಣಿಕ ಸಂಪನ್ಮೂಲಗಳು ಡಿ.ಎಸ್.ಇ.ಆರ್.ಟಿ ವೆಬ್ ಸೈಟ್ ನಲ್ಲಿ ಲಭ್ಯವಿದ್ದು, ಶಿಕ್ಷಕರು ಅವುಗಳನ್ನು ಬಳಸಬಹುದಾಗಿದೆ.

ಕಲಿಕಾ ಚೇತರಿಕೆ ಕಾರ್ಯಕ್ರಮದಲ್ಲಿ ಮೌಲ್ಯಮಾಪನದ ಸ್ವರೂಪ

1 ರಿಂದ 9 ನೇ ತರಗತಿಗಳಿಗೆ ಮೌಲ್ಯಮಾಪನ

ಪ್ರಸಕ್ತ ಸಾಲಿನ 1 ರಿಂದ 9 ನೇ ತರಗತಿಗಳಿಗೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಶಾಲಾಧಾರಿತ ಮೌಲ್ಯಮಾಪನ (ಸಿ.ಸಿ.ಇ) ವನ್ನು ಈ ಹಿಂದಿನಂತೆಯೇ ಮುಂದುವರೆಸಿದೆ. ಆದರೆ ಈ ಮೌಲ್ಯಮಾಪನವು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮರುಹೊಂದಿಸಿಕೊಂಡ ಕಲಿಕಾ ಫಲಗಳನ್ನು ಆಧರಿಸಿದ ಕಲಿಕಾ ಹಾಳೆಗಳು ಮತ್ತು ತರಗತಿಯಲ್ಲಿ ನಡೆಯುವ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಆಧರಿಸಿದೆ. ಮೌಲ್ಯಮಾಪನ ಸಂಬಂಧ ವಿವರವಾದ ಮಾರ್ಗಸೂಚಿಯನ್ನು ಪ್ರತ್ಯೇಕವಾಗಿ ನೀಡಲಾಗುವುದು.

10 ನೇ ತರಗತಿಗೆ ಮೌಲ್ಯಮಾಪನ

10ನೇ ತರಗತಿಗೆ 2021-2022 ನೇ ಸಾಲಿನಂತೆ ಸೇತುಬಂಧ ಕಾರ್ಯಕ್ರಮವನ್ನು 2022-2023 ನೇ ಸಾಲಿನಂತೆ ಮುಂದುವರಿಸಲಾಗುವುದು, ರೂಪಕಾತ್ಮಕ ಮೌಲ್ಯಮಾಪನ ಹಾಗೂ ಇತರೆ ಶೈಕ್ಷಣಿಕ ಚಟುವಟಿಕೆಗಳನ್ನು ಹಿಂದಿನಂತೆಯೇ ನಡೆಸಿ, ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗಳಿಗೆ ಸಿದ್ಧಗೊಳಿಸುವುದು.
Post a Comment (0)
Previous Post Next Post