ಶಿಕ್ಷಕ – ಜ್ಞಾನ ದಾರಿ ಬೆಳಗಿಸುವ ದೀಪಸ್ತಂಭ

“ವರ್ಣಮಾತ್ರಂ ಕಲಿಸಿದಾತಂ ಗುರು, ಮಹಾಸದ ವಿದ್ಯೆಯೇ ಪುಣ್ಯದಂ ಸುತನೆ ಸದ್ಗತಿ ದಾತನಯ್ಯ ಹರಹರ ಶ್ರೀ ಚನ್ನಸೋಮೇಶ್ವರ.” ಎಂದರೆ, ಕೇವಲ ಒಂದು ಅಕ್ಷರವನ್ನು ಕಲಿಸಿದವರೂ ಗುರುಗಳೇ. ಗುರು ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಶಕ್ತಿ. ಅಂತಹ ಗುರು ಸ್ಥಾನವನ್ನು ಪಡೆದ ಶಿಕ್ಷಕರು ಶಿಸ್ತು, ಕ್ಷಮೆ ಮತ್ತು ಕರುಣೆಯಂತಹ ಗುಣಗಳನ್ನು ಹೊಂದಿರುತ್ತಾರೆ. 

ಶಿಕ್ಷಕರು ಕೇವಲ ಓದು ಮತ್ತು ಬರಹವನ್ನು ಮಾತ್ರ ಕಲಿಸುವುದಿಲ್ಲ. ತಮ್ಮ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ನಡತೆ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸುತ್ತಾರೆ. ಜಾತಿ, ಮತ, ಪಂಥಗಳನ್ನು ಮೀರಿ, ಎಲ್ಲರನ್ನೂ ಸಮಾನವಾಗಿ ಕಾಣುವ ಸಹೋದರತ್ವದ ಭಾವನೆಯನ್ನು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಬಿತ್ತುತ್ತಾರೆ. ಈ ಮೂಲಕ ದೇಶದ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿರುತ್ತಾರೆ.

ಶಿಕ್ಷಕ – ಜ್ಞಾನ ದಾರಿ ಬೆಳಗಿಸುವ ದೀಪಸ್ತಂಭ

ಶಿಕ್ಷಕ ವ್ಯಕ್ತಿಯಲ್ಲ, ಅದೊಂದು ಶಕ್ತಿ

"ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ" ಎಂಬಂತೆ, ಶಿಕ್ಷಕರನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೆ ಹೋಲಿಸಲಾಗಿದೆ. ಏಕೆಂದರೆ ಗುರು ಎನ್ನುವುದು ಕೇವಲ ವ್ಯಕ್ತಿಯಲ್ಲ, ಅದೊಂದು ಶಕ್ತಿ. ಅವರು ಅಜ್ಞಾನದಿಂದ ಸುಜ್ಞಾನದತ್ತ ಕರೆದೊಯ್ಯುತ್ತಾರೆ. ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ, ಬುದ್ಧಿ ಹೇಳಿ, ಸರಿಯಾದ ಮಾರ್ಗದಲ್ಲಿ ನಡೆಯಲು ಪ್ರೋತ್ಸಾಹಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷಕರ ತ್ಯಾಗ ಮತ್ತು ಪರಿಶ್ರಮ ಅಡಗಿರುತ್ತದೆ. "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂಬಂತೆ, ವಿದ್ಯಾರ್ಥಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅದರ ಹಿಂದಿನ ಸೂತ್ರಧಾರಿ ಶಿಕ್ಷಕರೇ ಆಗಿರುತ್ತಾರೆ.

ಹಿಂದೂ ಧರ್ಮದಲ್ಲಿ ಗುರುವನ್ನು ಪರಬ್ರಹ್ಮನಿಗೆ ಸಮಾನವೆಂದು ಪರಿಗಣಿಸಲಾಗಿದೆ. ಗುರು ಶಿಷ್ಯರ ನಡುವಿನ ಸಂಬಂಧವು ಕೇವಲ ಬೋಧನೆ ಮತ್ತು ಕಲಿಕೆಗೆ ಸೀಮಿತವಲ್ಲ; ಇದು ಆತ್ಮೀಯ ಮತ್ತು ಪವಿತ್ರವಾದ ಸಂಬಂಧವಾಗಿದೆ. ಗುರುವು ವಿದ್ಯಾರ್ಥಿಯ ಜೀವನದಲ್ಲಿ ಬೆಳಕನ್ನು ತುಂಬುವ ದಾರಿದೀಪ. ಗುರುಕೃಪೆಯಿಲ್ಲದೆ ಯಾವುದೇ ಮಹತ್ಕಾರ್ಯ ಅಥವಾ ಜ್ಞಾನಸಾಧನೆ ಅಸಾಧ್ಯ. ಮಹಾಭಾರತದ ಕಥೆಯಲ್ಲಿ ಅರ್ಜುನನಿಗೆ ಕೇವಲ ಶಸ್ತ್ರಾಸ್ತ್ರ ವಿದ್ಯೆಯನ್ನು ಮಾತ್ರವಲ್ಲದೆ, ಯುದ್ಧಭೂಮಿಯಲ್ಲಿ ಧರ್ಮ ಮತ್ತು ಅಧರ್ಮಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಸಿದ ಶ್ರೀಕೃಷ್ಣನು ಮಹಾನ್ ಗುರು. ಅದೇ ರೀತಿ, ಮಹರ್ಷಿ ವಿಶ್ವಾಮಿತ್ರನು ಶ್ರೀರಾಮ ಮತ್ತು ಲಕ್ಷ್ಮಣರಿಗೆ ಯಜ್ಞದ ರಕ್ಷಣೆಗಾಗಿ ಕರೆದುಕೊಂಡು ಹೋಗಿ, ಅವರಿಗೆ ಲೋಕಜ್ಞಾನ, ಶಸ್ತ್ರಾಸ್ತ್ರ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿ ಅವರನ್ನು ಆದರ್ಶ ಪುರುಷರನ್ನಾಗಿ ರೂಪಿಸಿದರು.

ಶಿಕ್ಷಣದ ನಿಜವಾದ ಸಾರ್ಥಕತೆ

ವಿದ್ಯೆ ಮತ್ತು ಗುರುಗಳಿಗೆ ಬೆಲೆ ಕಟ್ಟಲಾಗದು. ಒಬ್ಬ ವ್ಯಕ್ತಿ ಎಷ್ಟೇ ಜ್ಞಾನ ಪಡೆದಿದ್ದರೂ, ಅದಕ್ಕೆ ವಿನಯವೇ ಭೂಷಣ. ಶಿಕ್ಷಣದ ನಿಜವಾದ ಸಾರ್ಥಕತೆ ಇರುವುದು ಒಬ್ಬ ವ್ಯಕ್ತಿ ಪ್ರಜ್ಞಾವಂತನಾಗಿ, ಜಾತಿ, ಮತ, ಮೇಲು-ಕೀಳೆಂಬ ಭೇದಭಾವಗಳನ್ನು ತೊರೆದು, ಸಹೋದರತ್ವದ ಭಾವನೆಯಿಂದ ದೇಶದ ಏಕತೆಗಾಗಿ ಶ್ರಮಿಸಿದಾಗ ಮಾತ್ರ. ವರ್ಗ ರಹಿತ ಮತ್ತು ಸಂಘರ್ಷ ರಹಿತ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದಾಗ ಮಾತ್ರ ಶಿಕ್ಷಣ ನಿಜವಾದ ಅರ್ಥವನ್ನು ಪಡೆಯುತ್ತದೆ.

ಬಸವಣ್ಣನವರು ಹೇಳಿದಂತೆ, "ಸಕಲ ಜೀವಿಗಳಿಗೂ ಲೇಸನ್ನೇ ಬಯಸುವುದೇ" ಶಿಕ್ಷಣದ ಮೂಲ ಉದ್ದೇಶವಾಗಿರಬೇಕು. ಶಿಕ್ಷಣ ಕೇವಲ ವೈಯಕ್ತಿಕ ಅಭಿವೃದ್ಧಿಗೆ ಸೀಮಿತವಾಗದೆ, ಸಮಾಜದ ಉನ್ನತಿಗೂ ಕಾರಣವಾಗಬೇಕು. ಅಂತಹ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಅವರು ತಮ್ಮ ತರಗತಿಗಳಲ್ಲಿ ಕೇವಲ ಪಠ್ಯ ಪುಸ್ತಕಗಳನ್ನು ಕಲಿಸುವುದಲ್ಲದೆ, ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಗಳ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಾರೆ.

ದೇಶದ ಭವಿಷ್ಯ ಶಿಕ್ಷಣದ ಮೇಲಿದೆ


ಒಂದು ದೇಶದ ಪ್ರಗತಿಯನ್ನು ಆ ದೇಶದ ಶಿಕ್ಷಣದ ಗುಣಮಟ್ಟದಿಂದ ಅಳೆಯಲಾಗುತ್ತದೆ. ಆಫ್ರಿಕಾದ ಒಂದು ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ಹೀಗೆ ಬರೆಯಲಾಗಿದೆ: "ಒಂದು ದೇಶವನ್ನು ಹಾಳು ಮಾಡಬೇಕಾದರೆ, ಅದರ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದರೆ ಸಾಕು, ಇಡೀ ದೇಶವೇ ಹಾಳಾಗುತ್ತದೆ." ಅದೇ ರೀತಿ, ಒಂದು ದೇಶವನ್ನು ಬದಲಾಯಿಸುವ ಸಾಮರ್ಥ್ಯವಿರುವ ಪ್ರಬಲ ಅಸ್ತ್ರವೇ ಶಿಕ್ಷಣ. ಶಿಕ್ಷಣವೇ ಎಲ್ಲ ವೃತ್ತಿಗಳ ತಳಹದಿ. ಅಂತಹ ಮಹತ್ತರವಾದ ಶಿಕ್ಷಕ ವೃತ್ತಿಯನ್ನು ಜಗತ್ತಿನ ಶ್ರೇಷ್ಠ ಪ್ರಶಸ್ತಿಯಾದ ನೊಬೆಲ್ ಪಾರಿತೋಷಕಕ್ಕೆ ಹೋಲಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್: ಶಿಕ್ಷಕರಿಗೊಂದು ಆದರ್ಶ


ದೇಶದ ಭವಿಷ್ಯವನ್ನು ರೂಪಿಸುವ ಈ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರನ್ನು ಗುರುತಿಸಲು, ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಭಾರತದ ಅಪರೂಪದ ಶಿಕ್ಷಣ ತಜ್ಞ, ರಾಜಕಾರಣಿ ಮತ್ತು ಭಾರತ ರತ್ನ ಶ್ರೀ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ.

ಇವರು 1888ರಲ್ಲಿ ಆಗಿನ ಮದ್ರಾಸಿನ ತಿರುಟಣಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರು ವೀರಸ್ವಾಮಿ ಮತ್ತು ಸೀತಮ್ಮ ದಂಪತಿಯ ಹದಿನಾಲ್ಕನೇ ಮಗ. ರಾಧಾಕೃಷ್ಣನ್ ಅವರು ಹೇಳಿದಂತೆ, "ಶಿಕ್ಷಕರು ಈ ದೇಶದ ಮೆದುಳಾಗಿರಬೇಕು." ಅವರು ಈ ಮಾತನ್ನು ಕೇವಲ ಹೇಳಿದ್ದಲ್ಲ, ಅದನ್ನು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದಿದ್ದರು. ಅವರು ಉಪಕುಲಪತಿಯಾಗಿ, ರಾಜ್ಯಪಾಲರಾಗಿ, ಉಪರಾಷ್ಟ್ರಪತಿಯಾಗಿ ಮತ್ತು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಎಂದಿಗೂ ಮರೆತಿರಲಿಲ್ಲ. ಒಮ್ಮೆ ಅವರ ವಿದ್ಯಾರ್ಥಿಗಳು ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಬಯಸಿದಾಗ, ಅವರು ಅದನ್ನು ತಮ್ಮ ಹುಟ್ಟುಹಬ್ಬವಾಗಿ ಆಚರಿಸುವ ಬದಲು, ಇಡೀ ದೇಶದ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವನ್ನಾಗಿ ಆಚರಿಸುವಂತೆ ಸಲಹೆ ನೀಡಿದರು. ಅಂದಿನಿಂದ, ಸೆಪ್ಟೆಂಬರ್ 5ನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವ ಸಂಪ್ರದಾಯ ಆರಂಭವಾಯಿತು.

ಶಿಕ್ಷಕರ ಈ ಮಹಾನ್ ಕಾರ್ಯವನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಉತ್ತಮ ಸಮಾಜದ ನಿರ್ಮಾಣದಲ್ಲಿ ನಮ್ಮ ಪಾತ್ರವೂ ಮುಖ್ಯವಾಗುತ್ತದೆ.
-----

ಲೇಖಕರು:
ಶ್ರೀ ರಂಗನಾಥ ಮರ್ಕಲ್, ಶಿಕ್ಷಕರು 
ಮಹಾತ್ಮಾ ಗಾಂಧಿ ಪ್ರೌಢಶಾಲೆ, ಚಿತ್ತಾಪುರ
 {alertInfo}

ಗಮನಿಸಿ: ಈ ಲೇಖನದಲ್ಲಿರುವ ಅಭಿಪ್ರಾಯ/ಅನಿಸಿಕೆಗಳು ಲೇಖಕರದ್ದೇ ಆಗಿದೆ, 'ಇ-ಜ್ಞಾನ'ವು ಈ ಲೇಖನದಲ್ಲಿನ ಅನಿಸಿಕೆ/ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ.

You May Also Like 👇

Loading...
Post a Comment (0)
Previous Post Next Post