ಏನಿದು ಆ ರೂಪಾಯಿಯ ಇ-ರೂಪಾಯಿ?!

- ಟಿ. ಜಿ. ಶ್ರೀನಿಧಿ

ಸಾಮಾನ್ಯವಾಗಿ ನಾಣ್ಯ ಅಥವಾ ನೋಟಿನಂತಹ ಭೌತಿಕ ರೂಪದಲ್ಲಷ್ಟೇ ಇರುವ ರೂಪಾಯಿಯನ್ನು ಸಂಪೂರ್ಣವಾಗಿ ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಇ-ರೂಪಾಯಿಯ ಹೆಚ್ಚುಗಾರಿಕೆ.

ಏನಿದು ಆ ರೂಪಾಯಿಯ ಇ-ರೂಪಾಯಿ?!



ಹಣಕಾಸು ವಹಿವಾಟುಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಫಿನ್‌ಟೆಕ್ ಎಂಬ ಪ್ರತ್ಯೇಕ ಕ್ಷೇತ್ರದ ವಿಕಾಸಕ್ಕೂ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಅನೇಕ ಬೆಳವಣಿಗೆಗಳಾಗಿವೆಯಾದರೂ ಆ ಪೈಕಿ ಜನಸಾಮಾನ್ಯರ ಗಮನ ಸೆಳೆದಿರುವ ಸಂಗತಿಗಳು ಕೆಲವೇ. ಇಂತಹ ಸಂಗತಿಗಳ ಪೈಕಿ 'ಕ್ರಿಪ್ಟೋಕರೆನ್ಸಿ' ಎಂಬ ಪರಿಕಲ್ಪನೆಗೆ ಮಹತ್ವದ ಸ್ಥಾನವಿದೆ.

ಸರಕಾರ-ಬ್ಯಾಂಕು ಮುಂತಾದವುಗಳ ಯಾವುದೇ ಹಸ್ತಕ್ಷೇಪವಿಲ್ಲದ ಹಣವೂ ಇರುವುದು ಸಾಧ್ಯ ಎಂದು ತೋರಿಸಿಕೊಟ್ಟಿದ್ದು ಈ ಪರಿಕಲ್ಪನೆಯ ಹೆಚ್ಚುಗಾರಿಕೆ. ರೂಪಾಯಿ - ಡಾಲರ್ - ಯೂರೋ ಮುಂತಾದವುಗಳೆಲ್ಲ ಆಯಾ ದೇಶದ ಸರ್ಕಾರ ಹಾಗೂ ಬ್ಯಾಂಕುಗಳ ನಿಯಂತ್ರಣದಲ್ಲಿರುವ ಕರೆನ್ಸಿಗಳು ಎನ್ನುವುದು ನಮಗೆ ಗೊತ್ತಿದೆ. ಆದರೆ, ಬಿಟ್‌ಕಾಯಿನ್, ಇಥೀರಿಯಮ್ ಮುಂತಾದ ಕ್ರಿಪ್ಟೋಕರೆನ್ಸಿಗಳನ್ನು ಯಾವ ಸರಕಾರವೂ ರೂಪಿಸಿಲ್ಲ. ಅಷ್ಟೇ ಏಕೆ, ಡಿಜಿಟಲ್ ರೂಪದಲ್ಲಷ್ಟೇ ಇರುವ ಈ ಹಣಕ್ಕೆ ನಾಣ್ಯ-ನೋಟುಗಳಂತಹ ಭೌತಿಕ ಅಸ್ತಿತ್ವವೂ ಇಲ್ಲ.

೨೦೨೨ರವರೆಗೆ ಡಿಜಿಟಲ್ ಹಣ ಎಂದಾಕ್ಷಣ ನಮಗೆ ನೆನಪಾಗುತ್ತಿದ್ದದ್ದು ಇಂತಹ ಕ್ರಿಪ್ಟೋಕರೆನ್ಸಿಗಳೇ. ನಮ್ಮ ರೂಪಾಯಿಯೂ ಡಿಜಿಟಲ್ ಆಗಲಿದೆಯೆಂಬ ಘೋಷಣೆ ಹೊರಬಿದ್ದಾಗ ಗೊಂದಲವಾದದ್ದೂ ಇದೇ ಕಾರಣದಿಂದ. ಇ-ರೂಪಾಯಿ (e₹) ಎಂಬ ಹೆಸರಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಬಳಕೆಗೆ ಬಂದಿರುವ ಈ ರೂಪಾಯಿ, ಆ ರೂಪಾಯಿಯ ಡಿಜಿಟಲ್ ಅವತಾರ ಅಷ್ಟೇ!

ಅಂದರೆ, ಸರಕಾರವೇ ಪರಿಚಯಿಸುವ ಈ ಬಗೆಯ ಡಿಜಿಟಲ್ ಹಣ ಕ್ರಿಪ್ಟೋಕರೆನ್ಸಿಗಳಂತೆ ನಿಯಂತ್ರಣರಹಿತವಾಗಿರುವುದಿಲ್ಲ. ಕ್ರಿಪ್ಟೋಕರೆನ್ಸಿಗಳಂತೆ ಇವುಗಳ ಮೌಲ್ಯ ವಿಪರೀತ ಏರಿಳಿತಗಳಿಗೆ ಗುರಿಯಾಗುವುದೂ ಇಲ್ಲ. ನಾಣ್ಯ ಅಥವಾ ನೋಟಿನ ಬದಲು ಇದು ಡಿಜಿಟಲ್ ರೂಪದಲ್ಲಿರುತ್ತದೆ ಎನ್ನುವುದನ್ನು ಹೊರತುಪಡಿಸಿದರೆ, ಸಾಮಾನ್ಯ ಹಣಕ್ಕೂ ಈ ಡಿಜಿಟಲ್ ಹಣಕ್ಕೂ ಬೇರೆ ಯಾವ ವ್ಯತ್ಯಾಸವೂ ಇರುವುದಿಲ್ಲ! ಒಂದು ರೂಪಾಯಿಯ ನಾಣ್ಯ ಬಳಸಿ ನಾವು ಯಾವ ಪೆಪ್ಪರ್‌ಮಿಂಟನ್ನು ಕೊಳ್ಳಬಹುದೋ ಅದೇ ಪೆಪ್ಪರ್‌ಮಿಂಟನ್ನು ಇ-ರೂಪಾಯಿ ಬಳಸಿಯೂ ಕೊಂಡುಕೊಳ್ಳಬಹುದು.

ಸರಕಾರಗಳು ಪರಿಚಯಿಸುವ ಈ ಡಿಜಿಟಲ್ ಹಣವನ್ನು 'ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ' (ಸಿಬಿಡಿಸಿ) ಎಂದು ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ನಾಣ್ಯ ಅಥವಾ ನೋಟಿನಂತಹ ಭೌತಿಕ ರೂಪದಲ್ಲಷ್ಟೇ ಇರುವ ಕರೆನ್ಸಿಯನ್ನು ಸಂಪೂರ್ಣವಾಗಿ ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಇವುಗಳ ಹೆಚ್ಚುಗಾರಿಕೆ.

ನಾವು ಈಗಾಗಲೇ ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಮುಂತಾದ ಡಿಜಿಟಲ್ ಮಾರ್ಗಗಳ ಮೂಲಕ ಹಣವನ್ನು ಬಳಸುತ್ತಿದ್ದೇವಲ್ಲ ಎಂದು ನೀವು ಕೇಳಬಹುದು. ಅದಕ್ಕೂ ಈ ಡಿಜಿಟಲ್ ಹಣಕ್ಕೂ ಏನಾದರೂ ವ್ಯತ್ಯಾಸ ಇದೆಯೇ?

ಖಂಡಿತಾ ಇದೆ. ನಾವು ಸದ್ಯ ಬಳಸುವ ಡಿಜಿಟಲ್ ಹಣ ಏನಿದ್ದರೂ ನಿರ್ದಿಷ್ಟ ಹಣಕಾಸು ಸಂಸ್ಥೆಯೊಂದಿಗಿನ ನಮ್ಮ ವ್ಯವಹಾರವನ್ನು ಅವಲಂಬಿಸಿರುತ್ತದೆ. ಅಂದರೆ, ನಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿದೆ ಎಂದು ನಮ್ಮ ಬ್ಯಾಂಕು ಒಪ್ಪಿಕೊಂಡರೆ ಮಾತ್ರ ಯುಪಿಐ ಮೂಲಕ ನಾವು ಅದನ್ನು ಬೇರೊಬ್ಬರ ಖಾತೆಗೆ ವರ್ಗಾಯಿಸುವುದು ಸಾಧ್ಯವಾಗುತ್ತದೆ. ಆ ಹಣ ನಿಮ್ಮ ಖಾತೆಗೆ ಬಂದಿದೆ ಎಂದು ಹಣ ಪಡೆದುಕೊಂಡವರಿಗೆ ಅವರ ಬ್ಯಾಂಕು ಹೇಳಿದಾಗ ಮಾತ್ರವೇ ಅವರು ಅದನ್ನು ಬಳಸುವುದು ಸಾಧ್ಯವಾಗುತ್ತದೆ.

ಆದರೆ ಸಿಬಿಡಿಸಿ ನಮ್ಮ ಪರ್ಸಿನಲ್ಲಿರುವ ನಾಣ್ಯನೋಟುಗಳ ಹಾಗೆ ನೇರವಾಗಿ ನಮ್ಮ ಬಳಿಯೇ (ಪರ್ಸಿನ ಬದಲು ಡಿಜಿಟಲ್ ವ್ಯಾಲೆಟ್‌ನಲ್ಲಿ) ಇರುತ್ತದೆ. ಅದನ್ನು ನಮ್ಮ ಬ್ಯಾಂಕಿಗೆ ಕಾಯಬೇಕಾದ ಅಗತ್ಯವಿಲ್ಲದೆ ನಾವೇ ನೇರವಾಗಿ ಇತರರಿಗೆ ವರ್ಗಾಯಿಸುವುದು ಸಾಧ್ಯ. ಆದ್ದರಿಂದ, ಬ್ಯಾಂಕ್ ಖಾತೆ ಇಲ್ಲದವರೂ ಡಿಜಿಟಲ್ ಹಣವನ್ನು ಬಳಸುವುದು ಸೈದ್ಧಾಂತಿಕವಾಗಿ ಸಾಧ್ಯವಾಗುತ್ತದೆ. ಬ್ಯಾಂಕುಗಳ ನಡುವಿನ ವಹಿವಾಟುಗಳನ್ನು ಸುಲಭಗೊಳಿಸುವುದಕ್ಕೂ ಸಿಬಿಡಿಸಿ ನೆರವಾಗುವುದು ಸಾಧ್ಯ. ಹಣದ ಮುದ್ರಣ ಹಾಗೂ ವಿತರಣೆಯ ದೃಷ್ಟಿಯಿಂದಲೂ ಸಿಬಿಡಿಸಿಯ ನಿರ್ವಹಣೆ ಸುಲಭ.

ಡಿಜಿಟಲ್ ಹಣಕ್ಕೆ ಬ್ಯಾಂಕುಗಳ ಮಧ್ಯಸ್ಥಿಕೆ ಬೇಡ ಎಂದರೆ ನಮ್ಮ ವಹಿವಾಟುಗಳ ದೃಢೀಕರಣ ಹೇಗೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಾಧ್ಯ. ಕ್ರಿಪ್ಟೋಕರೆನ್ಸಿಗಳಂತೆ ಸಿಬಿಡಿಸಿಗಳೂ ಒಂದು ವಿಕೇಂದ್ರೀಕೃತ ಲೆಡ್ಜರ್ ವ್ಯವಸ್ಥೆಯನ್ನು ಬಳಸಬೇಕಾಗುತ್ತದೆ. ಬಿಟ್‌ಕಾಯಿನ್‌ನ ಬೆನ್ನಿಗಿರುವ ಬ್ಲಾಕ್‌ಚೈನ್ ತಂತ್ರಜ್ಞಾನ ಇಂತಹ ವ್ಯವಸ್ಥೆಗಳಿಗೆ ಒಂದು ಉದಾಹರಣೆ. ಈ ವ್ಯವಸ್ಥೆಗಳೂ ಮೂಲತಃ ಲೆಕ್ಕದ ಪುಸ್ತಕದಂತೆಯೇ ಇರುತ್ತವಾದರೂ ಅವುಗಳ ಹೆಸರಿಗೆ ಅನುಗುಣವಾಗಿ ಒಂದಕ್ಕಿಂತ ಹೆಚ್ಚು ಪ್ರತಿಗಳಾಗಿ ಅಸ್ತಿತ್ವದಲ್ಲಿರುತ್ತವೆ. ಈ ಎಲ್ಲ ಪ್ರತಿಗಳ ನಿರ್ವಾಹಕರೂ ಒಪ್ಪಿದಾಗ ಮಾತ್ರವೇ ಹೊಸದೊಂದು ವಹಿವಾಟು ಲೆಕ್ಕದ ಪುಸ್ತಕದಲ್ಲಿ ದಾಖಲಾಗುತ್ತದೆ. ಸಿಬಿಡಿಸಿಯ ಲೆಕ್ಕದ ಪುಸ್ತಕ ಬ್ಲಾಕ್‌ಚೈನ್‌ನಲ್ಲಿ ಸಾಮಾನ್ಯವಾಗಿ ಆಗುವಂತೆ ಸಂಪೂರ್ಣ ಸಾರ್ವಜನಿಕವಾಗಿರದೆ ಕೇಂದ್ರೀಯ ಬ್ಯಾಂಕಿನ ನಿಯಂತ್ರಣದಲ್ಲಿರುತ್ತದೆ ಎನ್ನುವುದು ಮಹತ್ವದ ವ್ಯತ್ಯಾಸ.

ಹೊಸಬಗೆಯ ಈ ಹಣವನ್ನು ನಮ್ಮ ರಿಸರ್ವ್ ಬ್ಯಾಂಕು ಎರಡು ವಿಧಗಳಾಗಿ ವಿಂಗಡಿಸಿದೆ: ಬ್ಯಾಂಕುಗಳ ನಡುವೆ ನಡೆಯುವಂತಹ ಸಗಟು ವಹಿವಾಟುಗಳಿಗೆ ಬಳಕೆಯಾಗುವ 'ಹೋಲ್‌ಸೇಲ್' ಇ-ರೂಪಾಯಿ (e₹-W) ಹಾಗೂ ನಮ್ಮಂತಹ ಗ್ರಾಹಕರು ಚಿಲ್ಲರೆ ವ್ಯವಹಾರಕ್ಕೆ ಬಳಸುವ 'ರೀಟೇಲ್' ಇ-ರೂಪಾಯಿ (e₹-R). ಇವೆರಡೂ ವಿಧದ ಹಣವನ್ನು ಬಳಸುವ ಪ್ರಾಯೋಗಿಕ ಪರೀಕ್ಷೆಗಳು ೨೦೨೨ರ ಅಂತ್ಯದ ವೇಳೆಗೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇ-ರೂಪಾಯಿ ಇನ್ನೂ ಹೆಚ್ಚಿನ ಸಂಖ್ಯೆಯ ಗ್ರಾಹಕರ ಜೇಬನ್ನು, ಅಲ್ಲಲ್ಲ, ಫೋನನ್ನು ತಲುಪುವ ನಿರೀಕ್ಷೆಯಿದೆ.

ಇ-ರೂಪಾಯಿಯ ಬಗ್ಗೆ ನಿರೀಕ್ಷೆಗಳಿರುವಂತೆ ಹಲವು ಪ್ರಶ್ನೆಗಳೂ ಇವೆ. ಅವುಗಳಲ್ಲಿ ಮುಖ್ಯವಾದದ್ದು ಸುರಕ್ಷತೆಯ ಪ್ರಶ್ನೆ. ಮಾಹಿತಿ ತಂತ್ರಜ್ಞಾನದ ಇನ್ನಿತರ ಅನ್ವಯಗಳಂತೆಯೇ ಇಲ್ಲಿಯೂ ಸೈಬರ್ ಅಪರಾಧಗಳ ಹಾವಳಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಸಿಬಿಡಿಸಿ ಅನುಷ್ಠಾನದಲ್ಲಿ ವ್ಯವಸ್ಥೆಯ ಒಟ್ಟಾರೆ ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಡಬೇಕಾಗುತ್ತದೆ. ಕ್ರಿಪ್ಟೋಕರೆನ್ಸಿಗಳ ಸುತ್ತ ನಡೆದಿರುವ ಆರ್ಥಿಕ ಅಪರಾಧಗಳನ್ನು ಗಮನಿಸಿದಾಗ ಇದು ಬಹಳ ಮುಖ್ಯ ವಿಷಯ ಎನ್ನಿಸಿಕೊಳ್ಳುತ್ತದೆ.

ಬ್ಯಾಂಕುಗಳ ಮಧ್ಯಸ್ಥಿಕೆ ಬೇಡ ಎನ್ನುವುದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾರಕವಾಗಬಹುದಲ್ಲ ಎನ್ನುವ ಪ್ರಶ್ನೆಯೂ ಇದೆ. ಆದರೆ, ಡಿಜಿಟಲ್ ಹಣ ಇಟ್ಟುಕೊಳ್ಳುವುದು ನಮ್ಮ ಪರ್ಸಿನಲ್ಲಿ ನಾಣ್ಯ ನೋಟುಗಳನ್ನು ಇಟ್ಟುಕೊಂಡಂತೆಯೇ; ಅದಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲವಾದ್ದರಿಂದ ಅದು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವನ್ನೇನೂ ಬೀರಲಿಕ್ಕಿಲ್ಲ ಎಂದೂ ಹೇಳಲಾಗುತ್ತಿದೆ. ಸಣ್ಣಪುಟ್ಟ ವಹಿವಾಟುಗಳಿಗೂ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಕೂಡ ಇ-ರೂಪಾಯಿಯಿಂದಾಗಿ ದೂರವಾಗುವುದು ಸಾಧ್ಯ. ಆ ಮೂಲಕ ಬ್ಯಾಂಕುಗಳ ಮೇಲಿನ ಒತ್ತಡವೂ ಗಮನಾರ್ಹವಾಗಿ ಕಡಿಮೆಯಾಗಬಹುದು.

ಇವೆಲ್ಲಕ್ಕಿಂತ ಮುಖ್ಯವಾದದ್ದು ಖಾಸಗಿತನದ ಪ್ರಶ್ನೆ. ಡಿಜಿಟಲ್ ಹಣ ಬಳಸಿ ನಡೆಸಲಾಗುವ ಎಲ್ಲ ವ್ಯವಹಾರಗಳ ಮೇಲೂ ಸರಕಾರ ನಿಗಾ ಇಡುವ ಸಾಧ್ಯತೆ ಈ ಪ್ರಶ್ನೆಗೆ ಕಾರಣವಾಗಿರುವ ಅಂಶ. ಸದ್ಯ ಬ್ಯಾಂಕಿಂಗ್ ವ್ಯವಸ್ಥೆಯ ಪರಿಧಿಯೊಳಗೆ ನಡೆಯುವ ವ್ಯವಹಾರಗಳ ಮೇಲೆ ಮಾತ್ರ ಹೀಗೆ ನಿಗಾ ವಹಿಸುವುದು ಸಾಧ್ಯವಿದ್ದು, ಇ-ರೂಪಾಯಿ ಬಂದಮೇಲೆ ನಾವು ಯಾವತ್ತು ಎಲ್ಲಿ ಕೊತ್ತಂಬರಿ ಸೊಪ್ಪು ಕೊಂಡೆವು ಎನ್ನುವುದೂ ಸರಕಾರಕ್ಕೆ ಗೊತ್ತಾಗಬಹುದಲ್ಲ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಈ ನಡುವೆ ಗ್ರಾಹಕರು ತಮ್ಮಲ್ಲಿರುವ ಡಿಜಿಟಲ್ ರೂಪಾಯಿಗಳನ್ನು ಎಲ್ಲಿ ಯಾವುದಕ್ಕೆ ಖರ್ಚುಮಾಡಿದರೆನ್ನುವುದರ ಮೇಲೆ ನಿಗಾವಹಿಸುವ ಉದ್ದೇಶವಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿರುವುದಾಗಿಯೂ ವರದಿಯಾಗಿದ್ದು, ಇ-ರೂಪಾಯಿಯ ಮುಂದಿನ ಹೆಜ್ಜೆಗಳ ಕುರಿತು ಕುತೂಹಲ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.

ಜನವರಿ ೨೦೨೩ರ ಕುತೂಹಲಿಯಲ್ಲಿ ಪ್ರಕಟವಾದ ಲೇಖನ.
Post a Comment (0)
Previous Post Next Post